November 06, 2009

ಮಳೆಯೆಂಬ ಮಾಯೆ ||


ಕರ್ನಾಟಕದಲ್ಲಿ ಇತ್ತೀಚಿಗೆ ಹುಚ್ಚೆದ್ದು ಸುರಿದ ಮಳೆ...ಮಳೆ ನೆರೆಯಾಗಿ ತಂದ ಆತಂಕ...ಇದನ್ನೆಲ್ಲ ಕಂಡ ಬೆದರಿದ ನನ್ನೊಳಗೆ, ಪ್ರಕೃತಿಯ ಮುನಿಸಾಟಕೆ ಕಾರಣವನ್ನು ಹುಡುಕಾಡುವಾಗ .....ಈ ಕವಿತೆ ಹುಟ್ಟಿತು.
ಈ ಕವನ "
ಈ-ಕಸನಸು" ಆನ್ಲೈನ್ ಪತ್ರಿಕೆಯಲ್ಲಿ ಬೆಳಕಿಗೆ ಬಂದಿತ್ತು.

ಕಡಲುಕ್ಕಿ ನೀರ ನೊರೆ
ಉಗಿಯಾಗಿ ಗಾಳಿಯಲಿ
ಮುಗಿಲಾಗಿ ಬಾನಲ್ಲಿ
ನೆಲೆಗಿಳಿದು ಹನಿಯಾಗಿ
ಮಳೆಯಾಗಿತ್ತು ಬದುಕು

ಹನಿಯು ನೆಲೆಗಿಳಿದು
ಮಣ್ಣ ಹಸಿಯಾಗಿ
ಹಸಿರ ಹುಸಿರಾಗಿ
ಬದುಕು ಹಸನವಾಗಿ
ಸಾಗಿತ್ತು ಜಗದ ಮಾಯೆ.

ಎಂತಕೋ ಮುನಿಸಿದು
ಕಡಲು ಮೊರೆಯಿತು
ಮೋಡ ಮುಸಿಕಿತು
ಹನಿಯು ಬಿರಿದಿತು
ನೀರು ನೆರೆಯಾಯ್ತು

ತೊರೆಹಳ್ಳ ಹೊಳೆಯಾಗಿ
ಹೊಳೆಯು ಹುಚ್ಚಾಗಿ
ನೆರೆ ನಿಟ್ಟುಗೆಟ್ಟು
ಕೊಚ್ಚಿ ಕೊಂಡೊಯ್ತು
ಬದುಕನು ಮಾಯೆ!

ನಿಂತ ಬೆಳೆ ನೀರಾಗಿ
ನೀರಾಲ್ಲೇ ಮುಳಿಗೋಗಿ
ಕೂಳೇ ಇಲ್ಲದಾಗಿ
ಬಾಳೇ ಗೋಳಾಯ್ತು
ಇಂದು ನಾಳೆ ಮಾಯೆ!

ಯಾರು ಹೊಣೆಯಾರು
ಮಾಹೆಯ ಮುನಿಸಿಗೆ?
ಎನ್ನೆದೆಯೊಳಗೆ ಪಿಸುಗುಟ್ಟಿತು
ಮಾತಿಲ್ಲದೆ ಕಂಗು
ನಿನ್ನ ಬದುಕಿನ ಶೈಲಿಯೆಂದು!ಕುಮಾರಸ್ವಾಮಿ.ಕಡಾಕೊಳ್ಳ

June 04, 2009

ಇಂದು ವಿಶ್ವ ಪರಿಸರ ದಿನ

ಇವತ್ತು ದಿನಾಂಕ ಜೂನ್ ಐದಂತೆ
ಈದಿನವೆ ವಿಶ್ವ ಪರಿಸರ ದಿನವಂತೆ
ಗ್ಲೋಬಲ್ ವಾರ್ಮಿಂಗ್ ಮುಖ್ಯವಿಷಯವಂತೆ
ದಾರಿಯ ಅಕ್ಕ ಪಕ್ಕದಲ್ಲೂ
ಕಂಪನಿಗಳ ತುಂಬೆಲ್ಲಾ
ಶಾಲೆಯ ಆವರಣದಲ್ಲೂ
ವಿಶ್ವ ವಿದ್ಯಾನಿಲಯಗಳಲ್ಲೂ
ರೈಲ್ ಬಸ್ಸುಗಳ ಮೇಲು
ದಿನ,ವಾರಸುದ್ದಿ ಪತ್ರಿಕೆಗಳಲ್ಲೂ,
ಟೀ.ವ್ಹಿ. ರೇಡಿಯೋದಲ್ಲೂ
ಎಲ್ಲೊಲ್ಲೂ ಇದೇ ಬ್ಯಾನರ್ ಗಳ
ಸುದ್ದಿಗಳ ಭರಾಟೆಯಂತೆ

ಸಾರ್ವಜನಿಕ ವಾಹನ ನೂಕು ನುಗ್ಗಲಂತೆ
ಅದಕೆ ಪಟ್ಟಣದ ಜನಕೆ ಸ್ವಂತ ಗಾಡಿ ಬೇಕಂತೆ
ಒಬ್ಬರಿಗೆ ಒಂದೊಂದು ಕಾರು
ಸ್ಟೇಟಸ್ ಸಿಂಬಾಲಂತೆ
ಮಗನಿಗೆ ಕಾಲೇಜ್ ಗೆ ಹೋಗಲು
ಟೂ ಹಂಡ್ರೆಡ್ ಸಿ. ಸಿ ಬೈಕೇ ಬೇಕಂತೆ
ಮನೆಯಲ್ಲಿ ಫ್ರಿಜ್ ಇರಲೇ ಬೇಕಂತೆ
ಸಂತೆ ಸಾಮಾನು ತರಲು ಕೈಚೀಲ
ಜೊತೆಗೊಯ್ಯೋದು ಹಳೇ ಫ್ಯಾಶನಂತೆ
ಪಾಕೆಟ್ ಫುಡ್ ಫುಲ್ 'ಸೇಫ್' ಅಂತೆ
ಬಾಟಲಿ ನೀರು ತುಂಬಾ 'ಪ್ಯೂ'ರಂತೆ
ಸೊಳ್ಳೆ ಪರದೆ ಕಟ್ಟೋಕೆ ಪೇಶನ್ಸ್ ಇಲ್ಲವಂತೆ
ಅದಕೆ ಮಸ್ಕೂಟೋ ಕಾಯಿಲ್ ಹಚ್ತಾರಂತೆ
ಇಷ್ಟೇ ಅಲ್ಲ ಇನ್ನೆಷ್ಟೋ
ಪರಿಸರಕೆ ಹೊಗೆ ಉಗುಳೋ
ವಾತಾವರಣ ಬಿಸಿ ಏರೋ
ಪೂರಕ ಬದುಕು ನಡೆಸ್ತಾರೆ
ದೊಡ್ಡದಾಗಿ ಪರಿಸರ ರಕ್ಷಣೆ,
ಗ್ಲೋಬಲ್ ವಾರ್ಮಿಂಗ್
ಅಂತ ವರ್ಷಕ್ಕೊಮ್ಮೆ ಹೂಯ್ಲಿಡ್ತಾರೆ

ಶಕ್ತಿ ಮಿತವ್ಯಯ ಮಾಡಂತ
ಯಾರರ ಹಿತ ಮಾತಿಗೆ
ನಿಮ್ಮಪ್ಪಂದು ಏನ್ ಹೋಗುತ್ತೆ ಅಂತಾರೆ
ಮನೆ ಹೊರಗೆ ಹೋಗ್ತೀಯ
ಲೈಟ್, ಫ್ಯಾನ್ ಬಂದ್ಮಾಡು
ಅಂತ ಯಾರದ್ರು ಹೇಳಿದ್ರೆ,
ನಮ್ದೇನ್ ಹೋಗ್ತಾದೆ
ಮನೆ ಓನರ್ ಬಿಲ್ಲ್ ಕಟ್ತಾನೆ ಅಂತಾರೆ
ಚಾಕ್ಲೇಟ್ ತಿನ್ ಬೇಡ
ಪರಿಸರ ಕೆಟ್ಟೋಗುತ್ತಂದ್ರೆ
ಟೇಸ್ಟೇ ಇಲ್ದೋರ್ ಅಂತ ಮೂದಲಿಸ್ತಾರೆ
ಸಾರ್ವಜನಿಕ ವಾಹನ
ಉಪಯೋಗಿಸು ಅನ್ನೋ ಮಾತಿಗೆ
ಕಂಫಾರ್ಟ್ ಇಂಪಾರ್ಟೆಂಟ್ ಅಂತಾರೆ
ಎಲ್ಲರಿಗೂ ಬೇಕು ದೊಡ್ಡಮನೆ,
ಜೊತೆಗೆ ಪ್ರೈವೇಟ್ ರೂಮ್
ಅದರಲ್ಲಿ ಇರಬೇಕು ತೇಗ, ಬೀಟೆ
ಹೊನ್ನೆ ಮರಗಳ ಫರ್ನೀಚರ್
ವೆಸ್ಟರ್ನ್ ಟಾಯ್ಲೆಟ್ ಗೆ ನೀರು
ಜಾಸ್ತಿ ಬೇಕಾದ್ರು ಇದು ಹೊಸ
ಸ್ಟೈಲ್ ಅಂತ ಬ್ಲೈಂಡಾಗಿ ಫಾಲೋ ಮಾಡ್ತಾರೆ
ಹಳ್ಳೀಲಿ ನೀರು ಸಿಗದಿದ್ರೂ ದಿಲ್ಲಿಯವರಿಗೆ
ಬಾಟ್ಲು ನೀರು ಪೆಪ್ಸಿ ಕೋಲಗಳೇ ಬೇಕಂತೆ
ಹಳ್ಳಿಯಲಿ ನೀರಿಲ್ದೇ ಜನ ಸಾಯ್ತಾರೆ
ನೀವು ಹಿಂಗೆ ಮಾಡ್ಬಹುದೇ ಅಂದರೆ
ನಮ್ಮ ದುಡ್ಡು ನಮ್ಮಾತು
ಕೇಳೋಕೆ ನೀನ್ಯಾರು ಅಂತಾರೆ

ಇಷ್ಟೆಲ್ಲಾ ಮಾಡೋರು
ವಿದ್ಯಾವಂತ ಪಟ್ಟಣದವ್ರೇ ಆದ್ರೂನು
ಪರಿಸರ ಹಾಳಾಗ್ಲಿಕ್ಕೆ ಅನಕ್ಷರಸ್ಥ, ದಡ್ಡ
ಹಳ್ಳಿ ಜನಾನೇ ಕಾರಣ ಅಂತಾರೆ
ಮುಟ್ಲಿಲ್ಲ ಮಾಡ್ಲಿಲ್ಲ ಮೂಗ್ಯಾಕ್ ಮಸಿ ಆಯ್ತು
ಅನ್ನೋ ಮಾತಿನಹಾಂಗೆ ಹಳ್ಳಿ ಜನಕೆ
ಇಂದು ಪರಿಸರ ರಕ್ಷಣೆ ಬಗ್ಗೆ
ಬುದ್ದಿ ಜೀವಿಗಳಿಂದ
ಭಾಷಣ ಕೇಳೋ ಪಡಿಪಾಟಲು ಬಂತು

ಹಾಳಾಗುವುದಿಲ್ಲ ನಮ್ಮ ಪರಿಸರ
ಅಕ್ಷರ ತಿಳಿಯದ ದಡ್ಡ ಹಳ್ಳಿ ಜನರಿಂದ
ಇನ್ನು ನಾವು ಉಸಿರಾಡುವುದು
ಅವರು ನಡೆಸುವ ಸರಳ ಜೀವನದಿಂದ
ಇದಕ್ಕೆಲ್ಲ ನಮ್ಮ ಉಪಭೋಗ ಜೀವನ ಕಾರಣ
ನಿಲ್ಲುವುದೆಂತು ಪರಿಸರ ಮಾಲಿನ್ಯ
ನಿಲ್ಲದೇ ನಮ್ಮೆಲ್ಲರ ಕೊಳ್ಳುಬಾಕುತನ
ಅದಕೆ ಆಗಬೇಕು ನಮ್ಮ ಬದುಕು ಸರಳ
ನೆಟ್ಟು ಬೆಳಸುತ್ತಿರಬೇಕು ಅಡವಿಯಂತೆ ಮರ
ಇದೊಂದೇ ನಮಗೆ ಇರುವ ಸರಳ ಸೂತ್ರ

** ಕುಕೂಊs ..
ಪುಣೆ
07/06/08

December 25, 2008

** ನೆನಪು **


ಮರೆಯಲೆಂದು ಕಿಚ್ಚಿಟ್ಟೆ
ನೀನು ಬಿಟ್ಟುಹೋದ
ನೆನಪುಗಳಿಗೆ
ಬೆಂಕಿಯ ಕೆಂಬೆಳಕಿನಲ್ಲೂ
ಕಾಣುತ್ತಿದೆ
ನಿನ್ನ ಮೊಗವು
ಕುಕೂಊ....
(ಕುಮಾರಸ್ವಾಮಿ. ಕಡಾಕೊಳ್ಳ)
ಪುಣೆ

September 24, 2008

** ತರಲೆ ತರಳೆ **


----------ನನ್ನೊಬ್ಬ ಗೆಳತಿಯ ಬ್ಲಾಗಲ್ಲಿ ಸಿಕ್ಕ ತರಳೆ(ಹುಡುಗಿ)ಯ ತಿಟ್ಟ(ಚಿತ್ರ)ವನ್ನು ನೋಡಿದ ನನ್ನ ಕವಿ ಪಲುಕು(ಕಲ್ಪನೆ) ಕಟ್ಟಿದ ಕವಿತೆ ಇದು---------------

ಈ ತಿಟ್ಟ ನೋಡುಲು ಅನುವು ಮಾಡಿದ ಹೇಮಶ್ರೀಗೆ ನನ್ನಿ.
ಅವಳ ಬ್ಲಾಗ್ ಕೊಂಡಿ ಇಲ್ಲಿದೆ.
(ಹೇಮಶ್ರೀ )

http://daisyridgediary.blogspot.com/2008/08/total-solar-eclipse-on-aug-1-2008.html

****************

ಬಾನ ನೇಸರನು
ನಿನ್ನ ಒಡಲನ್ನು ಇಣುಕುತಿಹನು
ಕದ್ದು ತಿನ್ನ ಬಾರದು ಪೆದ್ದು
ತಮ್ಮನ ತಿಂಡಿಯಲ್ಲವನು

ತುಂಡು ಅಂಗಿಯನುಟ್ಟು
ಮೊಂಡು ಕೂದಲನು ಬಿಟ್ಟು
ಹಲ್ಲು ಗಿಂಜುತ ಹಗಲೆಲ್ಲ
ತರಲೆ ತರಳೆ ನಿನಾಗಿಹೆಯಲ್ಲ

ತಲೆಯ ಎತ್ತೊಮ್ಮೆ ನೋಡು
ಕಣ್ಣು ಪಿಳಿಕಿಸಿ ಕೇಳು
ಶಾಲೆಗೆ ಇಂದು ನೀನು
ಹೋಗಲಿಲ್ಲ ಯಾಕೆ ಹೇಳು

ಮರಳ ರಾಸಿಯಳಿ ಉರುಳಿ
ಗುಬ್ಬಚ್ಚಿ ಗೂಡನು ಮಾಡಿ
ಗಾಳಿಪಟವನು ಹಾರಿಸಿ ಏರಿಸಿ
ಹಸಿದಿರುವೆ ಬಾ ಹಣ್ಣು ಹಂಪಲವನುಣ್ಣು

ಹೇಳಿ ಕಳಿಸು ನೇಸರನಿಗೆ
ಮುಂದೆಂದೂ ಹೀಗೆ ಮಾಡೆನೆಂದು
ನಾಳೆ ನಸುಕಿನಲಿ ಬೇಗ ಎದ್ದು
ನಿನಗೆ ಕಯ್ಮುಗಿಯುವೆನೆಂದು

ಮೂಡಣದಿ ನೀ ಬರುವ ಹೊತ್ತಲ್ಲಿ
ಚಿಲಿಪಿಯನ್ನು ಹಾಡುವ ಹಕ್ಕಿಗೆ
ಕೀಟಲೆಯನು ಕೊಡದೇ ಚಂದದಿ
ಕೂತು ಇಂಪನು ಆಲಿಸುವೆನೆಂದು

*********
ಜಾಣೆ ನಾನಾಗುವೆನು ಎಲ್ಲರಲಿ
ಹಂಚಿ ತಿನ್ನುವೆನು ಸಂತಸದಿ
ತಪ್ಪಿಸೆನು ಶಾಲೆಯನು ಇನ್ನೆಂದು
ತರಲೆ ತರಳೆ ನಾನಲ್ಲ ತೋರಿಸುವೆನಿಂದು


**ಕುಕೂಊ.....
ಪುಣೆ

September 20, 2008

ಮುದ್ದೇ

ಓ ನನ್ನ ಮು'ದ್ದೇ'
ಇಲ್ಲ ಎನಗೆ ನಿದ್ದೆ
ಕಣ್ಣಲ್ಲೆಲ್ಲಾ ನೀನೇ ತುಂಬಿದ್ದೆ
ಕನಸು ಕಾಣುತಲಿ

ಕಟ್ಟೆ ಜಾರಿ ಬಿದ್ದೆ

ಕುಕೂಊ.............

July 10, 2008

ಒಂಟಿತನ!

ಹುಣ್ಣಿಮೆಯ ಕಂಡ ಸಾಗರದಂತೆ
ಉಕ್ಕಿಹುದು ಬೇಸರಿಕೆ, ಮನದಾಳದಿ
ದಾರಿತಪ್ಪಿದ ಗಿಳಿರಾಮನಂತೆ ಮನ
ಮುಗಿಲ್ಲೆಲ್ಲೊ ದಿಕ್ಕುತಪ್ಪಿ ಅಲೆದಿಹುದು.

ಕದಡಿದ ಕೊಳದ ಬಿಂಬದಂತೆ

ಮುದುಡಿ ಹೋಗುತಿಹದು ಮನವು
ಕೆರಳಿದ ಗಿಡುಗನ ಕೈಗೆ ಸಿಕ್ಕಪಾರಿವಾಳ
ಒಂಟಿಯಾಗಿ ನರಳುತಿಹುದು

ಗಾವುದ ಗಾವುದ ದೂರದಲ್ಲಿರುವ

ತನ್ನ ನೆಲೆಯನು ನೆನೆದಿಹುದು
ಮನ ಗುಮ್ಮನಂತೆ ಸುಮ್ಮನೆ ಕುಳಿತು
ಗುಟ್ಟಾಗಿ ಬೆಪ್ಪನೆ ದುಃಖಿಸಿಹುದು.

ಗಳಿ-ಗಳಿಗೆಯು ಗತಿಸಿದಾವುದನ್ನೋ

ನೆನೆದು ಹಿತವಿಲ್ಲದೆ ಗತವನ್ನೇ ಕೆದಕಿ
ಮಿತಿ ಇಲ್ಲದೆ ಮತ್ತಲೋ ಮಿಡಿದು
ಮೌನಿಸಿ ಮನದಲ್ಲೇ ಕನವರಿಸಿಹುದು.

ಒಲ್ಲದು ಹೊನ್ನು ಅನ್ನ ಮತ್ತೊಂದು

ಬಲ್ಲದು ಎಲ್ಲದರ ಮಹದಾನಂದ
ಬಯಸಿದೆ ಮನ ಸದಾನಂದ
ತಾಳಲಾರದೆ ಈ ಒಂಟಿತನ!

ತನ್ನವರ ನೆನದು ತವಕಿಸಿಹುದು

ಕಾಣುವ ಹಂಬಲವ ಕೋರಿ
ಬಾನೆತ್ತರಕ್ಕೆ ಕಂಗಳ ನೆಟ್ಟಿಹುದು
ಕಾಣುವೆನೆಂಬುದ ನೆನದು
ಕಣ್ಣಂಚಲಿ ಮಿಂಚು ಹೊಳೆದಿಹುದು.

**ಕುಕೂಊ..

June 27, 2008

ಚಿನ್ನ ಚಿನ್ನ ಹನಿ-02

** ತೊರೆ **

ನಿನ್ನ ದ್ವೇಷದ
ತೊರೆಯ ತುಂಬಾ
ಧುಮುಕಿ ಹರಿದಿದೆ
ನನ್ನ ಒಲವಿನ
ಸೆಲೆ

** ಬಿಂಬ **

ನಿನ್ನ ಸೇಡಿನ
ಬಿರುಗಾಳಿಗೆ
ಕದಡುತಿದೆನ್ನ
ಕಂಗಳ ಕೊಳದ
ಕನಸ ಬಿಂಬ

**ಚಾಪ **

ವಿರಸ ದ್ವೇಷಗಳ
ಕಾರ್ಮೋಡದಲ್ಲಿ
ಕಾಣಿಸುವುದೆನಗೆ
ಬರಿ ನಿನ್ನ
ನಗೆಯ ಚಾಪ

** ನಂಬಿಕೆ **

ಮುನಿಸು ಮುಳ್ಳಿನ
ಬಲೆಯನ್ನು ಸೀಳಿ
ಅರಳದಿರುವುದೇನು
ನಮ್ಮಿಬ್ಬರ ಕೆಳೆ ಗುಲಾಬಿ

ಕೆಳೆ-ಗೆಳೆತನ

** ಪ್ರಶ್ನೆ **

ಕಷ್ಟ ಕಾರ್ಪಣ್ಯಗಳ
ತೆರೆಯಲ್ಲಿ ಈಸಿ
ತೃಪ್ತಿ ದಾಯಕ
ತೀರ ಸೇರುವುದೇ
ಬದುಕೆ?


ಕುಕೂಊ...

June 25, 2008

ತೆರಪಿಲ್ಲದ ಬದುಕು

ಎಲ್ಲಾ ಖುಷಿ ಅಡಗಿದೆ ಎಲ್ಲರ ಸೆರಗಿನಲಿ
ಮೈಬಿಚ್ಚಿ ನಗುವುದಕ್ಕೆ ತೆರಪಿಲ್ಲ

ಮುಂಜಾನೆ-ಬೈಗೆನ್ನದೆ ನಡೆದಿದೆ ಬದುಕಿನ ಓಟ
ಆದರೆ ಬದುಕುವುದಕ್ಕೆ ಯಾರಲ್ಲೂ ತೆರಪಿಲ್ಲ

ಅವ್ವನ ಲಾಲಿ ಹಾಡಿನಲ್ಲಡಗಿದ ಒಲವು ತಿಳಿಯುತಿದೆ
ಅದರೆ ಅವ್ವಾ ಎಂದೊಂಮ್ಮೆ ಕರೆಯಲು ತೆರಪಿಲ್ಲ

ಎಲ್ಲಾ ಸಂಬಂಧಗಳನ್ನೇನೋ (ತಗಹು) ಕೊಂದಾಗಿದೆ
ಆದರೆರೀಗ ಅಂತ್ಯಕ್ರಿಯೆ ಮಾಡುವುದಕ್ಕೂ ತೆರಪಿಲ್ಲ

ಎಲ್ಲರ ಹೆಸೆರುಗಳೇನೋ ಮೊಬೈಲಿನಲ್ಲಿವೆ
ಅಕ್ಕರೆಯಿಂದೊಮ್ಮೆ ಮಾತನಾಡಲೂs ತೆರಪಿಲ್ಲ

ಬೇರೆಯವರ ಅಳಲು ಕೇಳುವುದು ದೂರದ ಮಾತು
ನಮ್ಮನ್ನ ನಾವೇ ತಿಳಿಯಲು ತೆರಪಿಲ್ಲ

ತುಂಬಿ ತುಳುಕುತಿದೆ ಕಣ್ಣಂಚಲ್ಲಿ ನಿದ್ದೆ
ಬೆಚ್ಚಗೆ ನೊಚ್ಚನೆ ನಿದ್ರಿಸುವುದಕ್ಕೂ ತೆರಪಿಲ್ಲ

ಅಚ್ಚಾಗಿವೆ ಚಂದದಿ ಹತ್ತಾರು ಹೊತ್ತಿಗೆಗಳು
ಒಂದಾದರು ಓದಿ ತಿಳಿಯಲು ತೆರಪಿಲ್ಲ

ದುಮ್ಮಳ ಉಮ್ಮಳಿಸಿದೆ ಹೃದಯದಲಿ
ಬಗೆತುಂಬಿ ಅಳುವುದಕ್ಕೂ ತೆರಪಿಲ್ಲ

ಹಣ ಕಾಂಚಾಣದ ಹಿಂದೆ ನಡದಿದೆ ನಾಗಾಲೋಟ
ದಣಿದ ಮೈಯನು ದಣಿವಾರಿಸಲು ತೆರಪಿಲ್ಲ

ಬೇರೆಯವರ ಸುಖ ದುಃಖಕ್ಕೆ ಮಿಡಿತವೆಲ್ಲಿ?
ನಮ್ಮ ಕನಸುಗಳನ್ನೇ ಕಾಣಲು ತೆರಪಿಲ್ಲವಿಲ್ಲದಾಗ

ಗಳಿಗಳಿಗೆಯು ಸಾಯುತ್ತ ಸಾಗುವವರಿಗೆ
ಬದುಕುವುದಕ್ಕೂ ತೆರಪಿಲ್ಲ

ನಿನೇ ಹೇಳೆನೆಗೆ ಓs! ನನ್ನ ಬದುಕೇ
ಏನಾಗಬಹುದು ತೆರಪಿಲ್ಲದೆ ಹೊರಟ ಈ ಬದುಕು

**ಕುಕೂ..
14/05/08

ನೊಚ್ಚನೆ=ಹಾಯಾಗಿ,ಸುಖವಾಗಿ
ದುಮ್ಮಳ=ದುಃಖ
ಉಮ್ಮಳಿಸಿ=ಉಕ್ಕಿ
ಬಗೆ=ಚಿತ್ತ, ಮನಸ್ಸು
ತೆರಪು=ಸಮಯ

ಚಿನ್ನ ಚಿನ್ನ ಹನಿ-01

** ನೆನಪು **

ನಿನ್ನ ಮರೆಯಲು
ಹೊರಟೆನ್ನ
ಮನದ ಕಲ್ಪನೆಯಲ್ಲಿ
ಎಲ್ಲೆಲ್ಲೂ ಮೇಳೈಸಿ
ಮೆರೆದಾಡುತ
ನಡೆಯುವ
ನಿನ್ನ ನೆಪುಗಳ
ಸಾಲು ಸಾಲು
ಜಾತ್ರೆ.


** ಮರೆವು **

ಮರೆತು ಬಿಡು
ಮನವೆ
ಮರೆತು ಬಿಡು
ಅವಳ ಸಿಹಿ ಕನಸಿನ
ಕಹಿ ನೆನಪನ್ನ
ಮರೆಯುತ್ತಲೇ
ಇರು ಪ್ರತಿದಿನ
ಪ್ರತಿಕ್ಷಣ !

** ಯಾತ್ರೆ **

ನಿನ್ನ ನೆನಪೇ
ನನ್ನ ಬದುಕಿನ
ಜಾತ್ರೆ
ಮರೆತರೆ
ನನ್ನ ಯಾತ್ರೆ


** ಮಾರ್ದನಿ **


ನನ್ನ ಮೌನ
ಮುಗಿಲಿನಲ್ಲಿ
ನಿನ್ನ
ಮಾತುಗಳದೇ
ಮಾರ್ದನಿ

June 20, 2008

ಉರುಳು


ಜೋರು ಮಳೆಯೆಂದು
ಮರದಡಿಗೆ ಧಾವಿಸಲು
ಎಲ್ಲೆಲ್ಲು ಉರುಳಿಗೆ
ಕೊರಳು ಕೊಟ್ಟು
ಜೋತಾಡುವ
ರೈತನ ಶಿರಗಳು


**ಕುಕೂಊ...

ಕತ್ತೆಲೆಯ ಕೊಡೆ

ಗೆಳತಿ,
ನಿನ್ನ ನಗುವು
ಕಾಣದೆನ್ನ
ಭಾವನೆಯ ಆಗಸ
ಅಮವಾಸ್ಯೆ ರಾತ್ರಿಯ
ನಕ್ಷತ್ರಗಳಿಲ್ಲದ
ಕತ್ತೆಲೆಯ ಕೊಡೆ.


** ಕುಕೂಊ..

May 31, 2008

** ಚಲ್ಲ ಮುಖ **

ಎಂದೋ ಕಂಡಕನಸಿನ
ಚಿತ್ರಗಳನ್ನ
ನೆನಪಿನ ಪರೆದೆಯ ಹಿಂದೆ
ಸರಿಸಿಟ್ಟಿದ್ದೆ
ಇಂದು ಪರೆದೆ ತೆರೆಗೊಳಿಸಿ ನೋಡಿದರೆ
ಎಲ್ಲೆಲ್ಲೂ ನಿನ್ನದೇ

'ಚಲ್ಲ ಮುಖ'

ಚಲ್ಲ- ನಗು

** ಕುಕೂಊ...

May 16, 2008

ನನ್ನ ಮುದ್ದು ಚಂದಿರ

ರಾತ್ರಿ ಹೊತ್ತಾಗೆ ಅಂಗಳದ ಬಯಲಾಗೆ
ಅವ್ವನ ಬಗಲಲ್ಲಿ ಎದೆಹಾಲು ಕುಡಿಯುತ್ತ
ಈ ಲೋಕ ಮರೆತು ನಾ ಮೇಲೆ ನೋಡಲು
ತೇಲೋ ಮೋಡದ ಮರೆಯಲ್ಲಿ ಇಣುಕಿ
ಬಾ ಎಂದು ನನ್ನ ಕರೆದಿದ್ದವನೇ
ನಿನ್ನ ಈ ಮೂದೇವಿ ಬಿಂದಿಗೆ ಚಂದಿರ

ಹಳ್ಳಾದ ದಂಡ್ಯಾಗೆ ಮಳ್ಳ ನಾ ಕುಳಿತಾಗ
ಬೆಳ್ಳಗೆ ಹೊಳೆಯುತ್ತ ಬಿಂಬದಾಗೆ ಕಾಣುತಿದ್ದ,
ನನ್ನೂರಿಂದ ನಿನ್ನೂರಿಗೆ ರಾತ್ರಿ ಹೊತ್ತಲ್ಲಿ
ನಾ ನಡೆದೋಗುವಾಗ ಬಿಡದೆ ಜೊತೆಯಲಿ ಬರುತ್ತಿದ್ದ
ನಿನ್ನ ಎದೆ ಉರಿಯ ಕಾರಣ ನನ್ನ ಬಿಂಬ ಚಂದಿರ

ನನ್ನೀ ಯೌವನದ ಮಾಯಾವಿ ಯಾತನೆಯಲ್ಲಿ
ಮೈಮರೆತು ಕನಸು ನೂರು ಕಾಣುವಾಗ
ಕಾಣದ ಒಲವಿನ ಗೆಳತಿಯ(ನಿನ್ನ) ನವುರು ರೂಪವನು
ತನ್ನ ಮೊಗದಲ್ಲೇ ತಂಪುಕಿರಣ ಬಾಣದಿಂದ ತೂರುತ್ತಾನೆ
ವೈಯಾರಿ ನಿನ್ನ ಸಿಡುಕಿನ ಕಾರಣ ನನ್ನ ಮುದ್ದು ಚಂದಿರ

ಬೇಡೆವೆಂದರು ನನ್ನ ಎದೆಯಲ್ಲಿ ಮೂಡಿ
ನನ್ನ ಹರಕು ಕವಿತೆಯ ಸಾಲಲ್ಲಿ ಬಂದು
ಬೆಳೆಕಿನ ಗೆರೆ ಎಳೆದು ನಗುತಾನೆ
ಎಲ್ಲೆಲ್ಲೋ ಅವನೇ ಮೂಡಿ ನಿನ್ನ ಕಾಣಿಸುತ್ತಾನೆ
ನೀನು ಮೂದಲಿಸುವ ನನ್ನ ಈ ತಂಪು ಚಂದಿರ

ನನ್ನ ಕವಿತೆಯ ಭಾವರೂಪವಾಗಿ
ಒಲವಿನ ಗೆಳತಿಯ ನೆನಪಿಗೆ ಬೆಳಕಾಗಿ
ನೊಂದ ಮನಸ್ಸಿಗೆ ಸಾಂತ್ವಾನ ಹೇಳಿ
ಒಂಟಿ ಮನಸ್ಸಿಗೆ ನಂಟಿನ ಗೆಳೆಯನಾಗಿ
ಎಲ್ಲೆಲ್ಲೋ ಯಾವಾಗಲೋ ಸದ್ದಿಲ್ಲದೆ
ಬಂದಿರುತ್ತಾನೆನನ್ನ ಕವಿತೆಯಲಿ ನಿನ್ನ
ವಕ್ರದ ಕಾರಣ ನನ್ನ ಭಾವ ಚಂದಿರ

** ಕುಕೂ..

May 09, 2008

ಚೆಲುವೆ ಚನ್ನಿ

ಚೆಲುವೆ ಚನ್ನಿ ಚಂದುಳ್ಳಿ ಚೆಲುವೆ
ಎಂತ ಹಸನ ನಿನ್ನ ಮಳ್ಳಿಯ ಮಾತ
ಮಳ್ಳಿ ಮಳ್ಳಿ ಮಂಚಕ್ಕೆ ಕಾಲೆಷ್ಟು
ಮೂರು ಮತ್ತೊಂದು ಎನ್ನೋ ಬೆಡಗಿನಲಿತ್ತು

ಮುಟ್ಟಿದರೆ ಮುನಿಯುವ ಗಿಡದಾಂಗೆ ನಿನಮನಸು
ಮುನಿಮುನಿದು ಮುದುಡಿ ಮತ್ತೇ ಬಿಡಿಯಾಗುತೈತ
ಮುನಿಸ್ಯಾಕೆ ಬಿರುಸ್ಯಾಕೆ ಸೊಗಸೀನ ನಗಿ ಸೂಸ
ನೆತ್ತಿಮ್ಯಾಲಿನ ಬಿದಿಗಿ ಚಂದ್ರ ನಾಚಿಬಿಡುವಾಂಗ

ಅದಲ್ಲೋ ದಾಸಯ್ಯ ಇದೆಂದು ಹೇಳಿದರು
ಅದೇಗುಡಿಯಾ ಮುಂದೆ ಟಿಂಗ ಟಿಂಗ ಎಂದ
ಎಂಬಾ ಮಾತಾಂಗ ಕಿಡಿಗೇಡಿ ನನಮನಸು
ಬುಸುಗುಟ್ಟುವ ನಿನಮನಸು ತಡವಿಕುಂತೈತ

ಕತ್ತೇಬಾಲದ ಜೊತೆ ಕುದುರೆ ಜುಟ್ಟಿಡಿದ
ನಿನ್ನ ನುಡಿಗುಟ್ಟು ಮಿಡುಕಾಡಿ ನನ್ನುಡುಕೈತ
ಕಡುಜಾಣೆ ಕಡ್ಲೆಬಟ್ಲು ನಿನ ಸಿಡುಕಕಂಡು
ಬಂದದಾರಿಗೆ ಸುಂಕವಿಲ್ಲದೆ ಮಂಕಾಗಿ ಕುಂತೈತ

ಎತ್ತು ಏರಿಗೆಳದರೆ ಕೋಣ ನೀರಿಗೆಳಿತಂತೆ
ನನಮನಸ್ಸು ಒಲವಿನಮಾತು ಕೇಳ್ತೈತ
ನಿನಮನಸ್ಸು ಸೇಡಿನ ಜಾಡು ಹಿಡಿದೈತ
ಇಂತಿರಲು ಬದುಕು ನಡೆಸುವುದೆಂತ ನೀಹೇಳ ಗಣತಿ

ಎನೇ ಆದರು ನೀನು ನನ್ನೊಲವ ಚೆಲುವೆ
ಬಿಟ್ಟುಕೊಡುವೆನಿಂದು ನನಗಟ್ಟಿವಾದವನು
ನಿನ್ನೆಮ್ಮೆ ಮಂದಿರಲಿ ನನಕೋಣ ಹಿಂದಿರಲಿ
ಮನ್ನಿಸಿ ಒಲವತೋರೊಮ್ಮೆ ಇನ್ನೂಸಿಡುಕ್ಯಾಕ

~~ ಕುಕೂ..

April 21, 2008

ಬಂತು ಬಂತು ಚುನಾವಣೆ

ಬಂತು ಬಂತು ನೋಡು ಚುನಾವಣೆ
ಮಿಂಡ ಪುಂಡ ಪೋಕರಿಗಳ ಚಲಾವಣೆ
ತುಂಬಿ ತುಳಿಕಿದ್ದರು ಊರಲ್ಲಿ ಬವಣೆ
ಮೀರಿ ನಡೆದಿದೆ ತಮ್ಮಲ್ಲೇ ಹಣಾಹಣೆ

ಉದ್ದುದ್ದ ಬೆಳೆದು ಅಡ್ಡದಾರಿ ಹಿಡಿದ

ಹೆಡ್ಡನಿಗೂ ಮೆರೆದಾಡುವ ಸುಗ್ಗಿ ಬಂತು
ತಿಂದು ಅಂಡೆಲೆದು ಕಾಲ ಕಳೆಯುವ
ಮೈಗಳ್ಳನಿಗೂ ಹೆಂಡದ ತೀರ್ಥ ಬಂತು

ಕಂಡ ಕಂಡ ಅಬಲೆ ಹೆಣ್ಣುಗಳ ಸೆರಗಲ್ಲಿ

ಇಣುಕಿದ ಲಜ್ಜೆಗೆಟ್ಟ ಕಚ್ಚೆ ಹರುಕರು
ಚುನಾವಣೆಯ ಸ್ಪರ್ಧೆಯಲಿ ಸೆಣಸಲು
ಸಜ್ಜಾಗಿ ಬರುವರು ನೋಟು ಕೊಟ್ಟು ಓಟುಕೇಳಲು

ಬಿದ್ದುಹೋಗಿರುವ ಗುಡಿ ಗೋಪುರಗಳು

ಉದ್ದಾರಮಾಡುವ ಹೆಡ್ಡರ ಮಾತುಗಳಿಗೆದ್ದು
ಆಪಕ್ಷ ಈಪಕ್ಷ ನೂರಾರು ಪಕ್ಷಗಳಗೆ
ಪಕ್ಷಾಂತರ ಗೊಳ್ಳುವ ಅವಾಂತದಲಿ ಸಿಲುಕುವವು

ಜಾತಿಯ ಕಿಚ್ಚಿಟ್ಟು ಎಂಜಲು ಹಂಚಿಟ್ಟು

ಮನಸ್ಸುಗಳ ನಡುವಿನ ಸೇತುವೆ ಮುರಿದಿಟ್ಟು
ಓಟು ಕಿತ್ತುಕೊಳ್ಳುವ ಸೂತ್ರವಿಡಿದು ಬರುವರು
ನಿತಿಗೆಟ್ಟರೂ ಗಾಂಧಿಯ ಮಾತನಾಡುವ ನಾಯಕರು


ಬೀದಿದೀಪಗಳಿಲ್ಲದೆ ಕತ್ತಲಲ್ಲಿ ಮರುಗಿದ್ದ

ಬೀದಿಕಂಬಗಳು ಮೂರು ದಿವಾದರು
ದೀಪದಲಿ ಬೀಗುತ್ತ ಬೆಳಗಿ ಮೆರೆಯುವವು
ಹರಡಿದ ಹೊನಲಿನಲಿ ಪಕ್ಷರಾಜಕಿಯ ನಡೆಯುವುದು

ಮೂಲೆಗುಂಪಾದ ದೀನ ಬಡಬಗ್ಗರಿಗೆ

ನೂರು ಭರವಸೆಗಳ ಸುಳ್ಳು ಆಸ್ವಾಸನೆಗಳು
ನಾವು ಅವರಂತಲ್ಲ ಲಂಚ ಹಗರಣ ನಮ್ಮಲ್ಲಿಲ್ಲ
ಒಮ್ಮೆ ಓಟುಕೊಟ್ಟು ನೋಡಿ ಎಂದು ಹೇಳುವರು

ಎಂದೂ ನಮ್ಮಕಡೆ ಮೂಸದ, ಹೆಣ್ಣು ಹೆಂಡ ಪಿಪಾಯಿಗಳು

ಶಂಡತನದಿ ಬಂದು ಕೈಯ ಕಾಲು ಹಿಡಿವರು
ಅಪ್ಪ ಅವ್ವ ಅಣ್ಣ ತಮ್ಮ ನೀವೆಲ್ಲ ನಮ್ಮವರು
ಎಂದು ಬೊಬ್ಬೆ ಇಟ್ಟು ಅರಚಿ ಕಿರುಚುವರು

ಊರಲ್ಲಿ ನೀರಿಲ್ಲದಿದ್ದರು ಹೆಂಡ ಸಾರಾಯಿ

ಬ್ರಾಂದಿಯ ಹೊಳೆ ಹರಿದು ಬರುವುದು
ಬಸ್ಸುಗಳೇ ಕಾಣದ ಊರದಾರಿಗಳಲ್ಲಿ ಮೂರುದಿನ
ಜೀಪು ಕಾರು ಗಾಡಿಗಳದೇ ಕಾರುಬಾರು

ಹಗರಣದಿ ಕೂಡಿಟ್ಟ ಬೊಗಣಿ ಕಾಂಚಣವನು
ತಂದು ನಿಮಗೆ ಹಂಚುವರು ಅರಿಯೋ ನೀ ಮಂಕೆ
ಇಂದು ಇದ ಮರೆತು ಎಂಜಲಿಗೆ ಕೈಚಾಚಿದರೆ
ಮುಂದೈದೊರುಷ ದಿನ ನಿನ್ನೇ ಹರಿದು ತಿನ್ನುವರು


** ಕುಕೂ..

April 19, 2008

ಕಾದಿರುವೆ ಅಭಿಸಾರಿಕೆಇನಿಯ ನಿನ್ನ ಕನಸನ್ನು ಕಂಗಳಲಿ ಕಟ್ಟಿ
ಕಾದಿಹೆನು ಎವೆಮುಚ್ಚದೆ ಕಾತುರದಿಂದ
ನಿದ್ದೆಯಲಿ ಜಾರಿಬಿಡುವೆನೆಂಬ ಆತಂಕ
ಕಂಗಳ ತೆರೆದು ನಿನ್ನ ಹುಡುಕುತಿರುವೆನು

ನಿನ್ನೆ ನೀ ತಂದು ಮುಡಿಸಿದ ಮಲ್ಲೆ
ಮುದುಡಿ ಬಾಡಿ ಮುನಿಸಿ ಮಾಸಿಹವು
ಇಂದು ತರುವೆಯ ಬಿಳಿದುಂಡು ಮಲ್ಲಿಗೆ?
ಎಂದು ಮನಸು ಮೌನದಲಿ ಕೇಳಿಹುದು

ಕಂಗಳ ಕೊಳದೊಳಗೆ ನಿನ್ನದೇ ಬಿಂಬ
ಸನಿಹವಿರದ ನಿನ್ನನ್ನು ಅಲ್ಲಿ ಕಾಣುತಿಹೆನು
ವಿರಹ ವಡಬಾನಲವಾಗಿ ಕುದಿಯುತಿಹುದು
ಬಾರೋ ಕಾಂತ ಕೊಳಬತ್ತುವ ಮೊದಲು

ಒಂಟಿಯಾಗಿ ಕುಳಿತಿರುವೆ ಗೋಡೆಗಳ ನಡುವೆ
ನೆನವುತ್ತ ಮುದದಿ ನೀಕೊಟ್ಟ ಚುಂಬನ
ಆದರದಿ ನೀನು ಬಿಗಿದಪ್ಪಿದ ಬಿಸಿ ಆಲಿಂಗನ
ಮೈಯಲ್ಲಿ ನವುರು ಯಾತನೆ, ಅಣೆಯಲ್ಲಿ ಬೆವರು

ಹಸಿವಿನ ಅರಿವಿಲ್ಲ ಉದರ ಬರಿದಾದರು
ಬರಿ ನಿನ್ನದೇ ನೆನಪು ಕ್ಷಣಕ್ಷಣವು ಕನವರಿಕೆ
ಕಾಲಸೂಚಕನ ಮುಳ್ಳು ತಿರುಗದೆ ತಡದಂತೆ
ಗಳಿಗೆ ಯುಗವಾಗಿ ಬಳಲಿರುವೆ ಬಾರೋ

ಹಲ್ಲಿ ಲೊಚಗುಟ್ಟಿದರೂ, ಕರು ನೆಗೆದರೂ
ಇರುವೆ ನಡೆವ ಶಬ್ದ ಸುಳಿದರೂ ಸಾಕು
ಮನಕೆ ನೀ ನಡೆದು ಬಂದೆಂಬ ತಳವೆಳಗು
ಮುನಿಸು ಮನದಲ್ಲಿ ಜಗದ ಜಂಜಾಟದಲ್ಲಿ

ಇಣುಕಿದೆ ಸೂರ್ಯ ರಶ್ಮಿ ತೆರದ ಕಿಟಕಿಯಲಿ
ಸುಯ್ಯುತಿದೆ ಗಾಳಿ ಸುಳಿ ಸುಳಿಯಾಗಿ
ವಾಲುತ್ತ ಪಡುವಣದಿ ನಿತ್ಯ ನಡೆದಿಹನು
ತಡ ಇನ್ನುಯಾಕೋ ಇನಿಯ ನೀಬಾರೋ ಬೇಗ

ಕಾಲಲ್ಲಿ ಕಿರುಗೆಜ್ಜೆಯ ಗಲಿರು ಗಲಿರು ನಾದ
ಕೋಣೆಯಲಿ ಕೈ ಬಳೆಯ ಮನ ಮೋಹಕ ಸದ್ದು
ಉಸಿರ ಬಿಸಿ ಏರುತಿದೆ ನೆನಪಿನ ಸುಳಿದಾಟಕೆ
ರತಿಬಯಕೆಯ ಬಸಿರು ಕ್ಷಣಗಣಿಕೆಯ ನಡೆಸಿದೆ

ಬಿಸಿಕೂಳ ಕೈತುತ್ತು ಉಣಿಸುವ ಬಯಕೆ
ಜೇನುತುಪ್ಪ ಸೇರಿಸಿ ಹಾಲುಸಕ್ಕರೆ ಬೆರಸಿ
ನಿನಗೆ ಕುಡಿಸುವ ಹಂಬಲವು ಮನದಲ್ಲಿ
ಅಂಗನೆ ಅಭಿಸಾರಿಕೆ ನಾನು, ಕಾದಿರುವೆ ಬಾರೋ
** ಕುಕೂ....


ತಳವೆಳಗು-ಭ್ರಮೆ

April 17, 2008

ಕೊಂಕು........!


ಕೊಳದೊಳಗೆ ಕಲ್ಲು ಹಾಕಿ
ಚಂದ್ರ ಬಿಂಬ ಕದಡಿದ ಕೈ
ಕೊಂಕಿನಿಂದ
ಕೇಳಿತು
ನಿನಗೆ ಕೋಪ ಬರಲಿಲ್ಲವೇ
ಎಂದು,
ಮಂದಾಹಾಸವ ಬೀರಿ
ನಗುನಗುತಲಿ
ನೋಡುತಿದ್ದ
ನನ್ನನ್ನು
ಪಕ್ಕದ ಕೊಳದಲ್ಲಿ
ಆ ಬಿದಿಗೆ ಚಂದ್ರಮ


`~ ಕುಕೂ ~~ಕುಮಾರ ಸ್ವಾಮಿ ಕಡಾಕೊಳ್ಳ
ಪುಣೆ
12/10/06

April 08, 2008

** ಯುಗಾದಿ ಬಂತು ಯುಗಾದಿ **

ಯುಗಾದಿ ಬಂತು ಯುಗಾದಿ
ನಮ್ಮ ಹೊಸವರ್ಷ ಯುಗಾದಿ
ಕಟ್ಟೋಣ ಮಾವು ಬೇವಿನ ತೋರಣ
ಶೃಂಗಾರ ಮಾಡೋಣ ಮನೆ ಆವರಣ

ಉದುರಿ ಹೋದವು ತರಗಲೆಗಳು
ಚಿಗುರಿ ಬಂದವು ಹಸಿರೆಲೆಗಳು
ಬಿರಿದರಳಿ ನಗುತಿವೆ ಬಣ್ಣದ ಹೂಗಳು
ಸೆಳೆದೆಳದಿವೆ ಭೃಂಗಗಳಿಂಡನು

ಚೈತ್ರಮಾಸದ ಹಸುರಿನ ತೇರಿನಲ್ಲಿ
ತರುಗಳಲ್ಲಬ್ಬಿದ ಹೂತೊಂಗಲಲ್ಲಿ
ಬಿಸಿಲೇರಿದ ತಿಳಿಬೆಳಗಿನ ಹಾದಿಯಲ್ಲಿ
ಬಂದಿದೆ ನೋಡು ಹೊಸವರ್ಷ ಯುಗಾದಿ

ತಣ್ಣನೆ ಸುಯ್ಯುವ ಸುಳಿಗಾಳಿಗೆ ತಣಿದು
ಕುಹೂ ಕುಹೂ ಎಂದಾಡಿದೆ ಕೋಗಿಲೆ
ಸೂಸುವ ಕಂಪನು ಹೀರುತ್ತ ಜೋರು
ಝೇಂಕಾರ ಹೊಮ್ಮಿಸಿದೆ ದುಂಬಿಯ ದಂಡು

ಬೇವು ಬೆಲ್ಲವ ಬೆರಸಿ ಮೆಲ್ಲುತ
ಕಷ್ಟ ಸಹಿಸುತ ಸುಖವ ಅರಸುತ
ಜಟ್ಟಿ ಬಾಳನು ಗಟ್ಟಿಸಿ ಬಾಳಿರೆನುತ
ಬಂದಿದೆ ಸೊಗಸ ಹೊಸವರ್ಷ ಯಗಾದಿ

ವರ್ಷಕೊಮ್ಮೆ ಮರಳುವುದು ಯುಗಾದಿ
ಹಸಿರಲ್ಲಿ ಬೀಗುತ ಕಂಪಲ್ಲಿ ಮೀಗುತ
ತುಂಬಿಸಿ ಎಲ್ಲರಲು ಹೊಸತು ಸಂತಸ
ಭಾವಕ್ಕೆ ಸಿರಿಯನ್ನ ಬೆರೆಸಿರೆನ್ನುತ


** ಕುಕು...

April 05, 2008

** ಒಲವ ಸುಮ ಅರಳಲು **


ಬೆಚ್ಚಿರುವೆ ಯಾಕೆ ನನ್ನಕ್ಕರೆಯ ಸುಮವೆ
ನಾನೇಗೆ ನಲಿಯಲಿ ನೀ ದುಃಖಿಯಾದರೆ
ನಿನ್ನ ದುಃಖಕ್ಕೆ ಕಾರಣವ ತಿಳಿಸು
ಕೋಟಿ ಕಷ್ಟಮೆಟ್ಟಿ ನಗುವ ಹೊತ್ತುತರುವೆನು

ಇರಲಿ ನೂರು ಅಡೆತಡೆ ಕೆಡುಕುಗಳು
ಜಾಲವೆ ಬೀಸಿದರು ನುಗ್ಗಿ ಬಿಡುವೆನು
ಪ್ರಾಣವನೆ ಕೇಳಿದರು ಒತ್ತೆ ಇಡುವೆನು
ನಿನ್ನ ದುಃಖವನು ನಾದೂರಮಾಡಲು

ಮಿಟುಕಿ ಹಾಕುವೆನು ಕುಟಿಲ ಕೆಡುಕುಗಳನು
ಈಸುವೆನು ನೋವಿನ ಸೆಳುವು ಇದಿರಾದರು
ನಿನ್ನ ನಗುವಿಗಾಗಿ ಹಂಗುತೊರೆವೆನು
ವಿಷವಾದರು ಕುಡಿವೆನು ಅಮೃತವೆಂದು

ಸುಡುಬಿಸಿಲಿದ್ದರೆ ನೆರಳಾಗಿ ಬರುವೆ
ಮರುಭೂಮಿ ಧಗೆಯಲ್ಲಿ ನೀರಾಗಿ ತನಿಸುವೆ
ಸಾವಿರ ನೋವಿದ್ದರು ನಿಶ್ಚಿಂತೆಯಲಿ ನುಂಗುವೆ
ತಿಳಿಸು ನಿನ್ನ ನೋವಿನ ಕಾರಣವನಿಂದು

ನಿನ್ನ ಕಂಗಳು ಹನಿದರೆ ನನ್ನೆದೆ ಬತ್ತುವುದು
ನೀರೋದಿಸಿದರೆ ನನ್ನುಸಿರು ಕಟ್ಟುವುದು
ಅಳುಮೋರೆ ಕಂಡೆನ್ನ ಬದುಕೆಲ್ಲ ಕಾವಳವು
ನಿನ್ನ ನೋವನರಿತೆನ್ನೋಡಲು ವಡಬಾನಲವು

ನೀಹೇಳದಿದ್ದರು ಅರಿವುದೆನ್ನ ಹೃದಯವು
ನಿನ್ನೆದೆಯ ಮೊನಚು ನೋವಿನಾಳವನು
ನಾತಾಳಲಾರೆ ಅದುಯಾವ ಜನ್ಮದನಂಟೋ
ನೀದುಃಖಿಯಾದರೆ ಮನ ಅತ್ತುಬಿಡುವುದು

ಏರು ಇಳಿತಗಳ ನಡುವೆ ಇದ್ದರು ಜಾಡು
ನೋವು ನಲಿವಿನ ಅರಿವಿನಲಿ ನಡೆದೆರೆ
ಬಲುಸೊಗಸು ನೋಡು ಬಾಳಪಯಣವು
ಅಳಬೇಡ ನನ ಗೆಣತಿ ಬದುಕು ಬಲುಚಂದ

ನಿನ್ನ ನಗುವೆ ಹೂವಿನಾ ಮಂದಹಾಸವು
ಕಾದಿರುವೆನು ಬಿರಿದರಳುವ ಹೂವನೋಡಲು
ನಕ್ಕುಬಿಡುವೊಮ್ಮೆ ಒಲವ ಸುಮ ಅರಳಲು
ಸಾಕು ನನಗದೊಂದೆ ಬೇರೇನು ಬೇಡೆನು

** ಕುಕೂ....

March 20, 2008

** ಅದೋ ಕನ್ನಡ ಕೂಗಿದೆ **

ಅಡಿಗಡಿಗೆ ಕನ್ನಡ ಕನ್ನಡ ಅಂತ
ಬರಿ ಬಣಗುಟ್ಟಿದರೆ ಒಣಜಂಬವಾದಿತೋ
ಮಾತುಮಾತಲಿ ಇರಬೇಕು ಸವಿಕನ್ನಡ
ನಡೆನುಡಿಯಲಿ ತೋರಬೇಕು ಸಿರಿಕನ್ನಡ

ಸಿರಿಕನ್ನಡದ ಅಂತ ಹಿರಿಯ ಮಾತನಾಡಿ
ಅಕ್ಕಪಕ್ಕದವರನು ಮೂದಲಿಸಿ ಸಿಡುಕಾಡಿ
ತೆಲುಗು ತಮಿಳು ಮರಾಠಿಗರಿಗೆ ಬೇಡವಾಗಿ
ಇಂಗ್ಲೀಷ್ ಗಂಟಿಕೊಂಡರೆ ಮಿಂಡರಾಗಿಬಿಡುವೆವೋ

ಇಂಗ್ಲೀಷ್ ಅಂತರಾಷ್ಟ್ರಿಯ ಬರಿ ಭ್ರಮೆನೀರಸ
ಉದಾರಿಕರಣ ವೈಶವೀಕರಣ ಬರಿ ವ್ಯಾಪಾರಿಕರಣ
ಬಡಿವಾರದಿಂದ ಕೊಚ್ಚುವ ವೈಶವಿಕರಣ ಹುಸಿನಾಟಕ
ವಿಧವಿಧ ವೈವಿದ್ಯ ಸೃಷ್ಠಿಯ ಮೂಲಮಂತ್ರ

ಕನ್ನಡದ ಕೊರಳ ಕಟ್ಟಿದೆ ಇಂಗ್ಲೀಷಿನ ಉರುಳಲ್ಲಿ
ನಾರುತ್ತಿದೆ ನಾಡು ಪಾಶ್ಛತ್ಯರ ಸೆರೆ ಸೆರಗಿನಲಿ
ಬೆತ್ತಲಾಗಿ ಬಿಕ್ಕುತ್ತಿದೆ ನಮಗಂಟಿದ ಗುಲಾಮಿಯಲಿ
ಹಂಗುತೊರೆದು ನಮ್ಮ ಸಿರಿಸಂಸ್ಕೃತಿ ಉಳಿಬೇಕಿಂದು

ಅವಹೆಚ್ಚಲ್ಲ ನಾವು ಕಡಿಮೆಯಲ್ಲ ಅವರಿಗವರದೆಚ್ಚು
ಇರಲಿ ಅವರಿವರ ನಡೆನುಡಿಯಲ್ಲಿ ಸಾಮರಸ
ಕಿಚ್ಚಿರಲಿ ನನ್ನದೆಂಬ ಅಭಿಮಾನ ಸ್ವಾಭಿಮಾನ
ತನ್ನತನತೋರೋಣ ದಿಟ್ಟತನದಿ ಬಿಟ್ಟು ಒಣಜಂಬ

ಮರೆತು ನಮ್ಮೂರ ಹಿರಿಸಿರಿ ಸಂಸ್ಕೃತಿ
ಬೆನ್ನೂರ ಅಬ್ಬರ ಬರಿಸಿ ತನ್ನೊಳು ವರಿಸಿ
ಅಧುನಿಕ ಬಡಿವಾರಿ ನಾವಾಗಿ ತೋರಿದರೆ
'ಸಿರಿಗನ್ನಡಂ ಗೇಲ್ಗೆ' ಅಲ್ಲ 'ಗಲ್ಲಾ'ಗುವುದೋ

ಉಡುಗೆ ತೊಡಿಗೆಯಲಿರಲಿ ಕನ್ನಡದ ಹೊಳಪು
ಕೂಳು ಕಾಳಿನಲಿರಲಿ ಕನ್ನಡದ ಕಂಪು
ನುಡಿವ ಮಾತಿನಲಿರಲಿ ಕನ್ನಡದ ಇಂಪು
ಆಗ ಬೆಳೆವುದು ನೋಡು ಕನ್ನಡದ ಸೊಂಪು


** ಕುಕೂ..

March 06, 2008

ಹೆಜ್ಜೆ ಗುರುತುಹತ್ತು ಹಲವು ತಿರುವಿನಲ್ಲಿ
ಸುತ್ತುಹಾಕಿ ಬೆಪ್ಪನಾಗಿ
ನಡೆದು ಬಂದೆ ಹುಟ್ಟಿನಿಂದ
ಬದಕಿನ ದೂರ ದಾರಿಯಲ್ಲಿ

ಬಾಲ್ಯದಾಟ ಸೊಗಸ ದಾಟಿ
ಏರಿಬಂದ ಯವೌನ ಮೀಟಿ
ಕೂಡಿಕೊಂಡು ಸರಸ ಸತಿ
ದಾಟುತಿಹೆನು ಬದುಕ ತಟ

ಕಾಮ ಮೋಹ ಈರ್ಷ್ಯೆ ದ್ವೇಷ
ಸೆಳವಿನಲ್ಲಿ ಸೆಣಸಿ ಬಂದೆ
ಪ್ರೀತಿ ಪ್ರೇಮ ಸ್ನೇಹ ಅನುಭಂದ
ಸಮ್ಮೋಹಿತ ಸಾರ ಹೀರಿ ಬಂದೆ

ಏಳು ಬೀಳು ನಿತ್ಯ ಬಾಳು
ಹಗಲು ರಾತ್ರಿ ಎಲ್ಲ ಗೆದ್ದು
ಎದ್ದು ಬಂದೆ ನೆನಪು ತುಂಬಿ
ಇದ್ದ ದಾರಿ ನಡೆದು ಸವೆಸಲು

ಹುಟ್ಟು ಸಾವು ಎರಡು ತೀರ
ಸುಖ ದುಃಖ ಬದಿ ಅಕ್ಕ ಪಕ್ಕ
ಅರಿವು ಮರೆವು ಮೇಲೆ ಕೆಳಗೆ
ನಡುವೆ ನನ್ನ ಬಾಳ ದಾರಿ

ಹುಟ್ಟು ಅಕಸ್ಮಿಕ ಆರಂಬದಲ್ಲಿ
ಜ್ಞಾನ ದೀಪ ಬೆಳಕಿನಲ್ಲಿ
ಹುಟ್ಟು ಸಾವು ಮಿಲನದಲ್ಲಿ
ಸಾವು ನಿಚ್ಚಿತ ನೆಚ್ಚಿ ಹೊರಟೆ

ಎದ್ದು ಬಿದ್ದು ಉತ್ತು ಬಿತ್ತಿ
ನನ್ನದಲ್ಲದ ಎಲ್ಲ ಬಿಟ್ಟು
ಅನುಭವಗಳ ಹೆಜ್ಜೆ ಗುರುತು
ಬಿಟ್ಟು ಬಂದೆ ಮುಂದೆ ಮುಂದೆ

February 21, 2008

ಮನವು ನೊಂದಿದೆ ಗೆಳತಿ


ಮನವು ನೊಂದಿದೆ ಗೆಳತಿ
ನನ್ನ ಮನ ನೊಂದಿದೆ ಗೆಳತಿ
ನಿನ್ನ ಮೌನದಿಂದ ಎದೆಬಿರಿದೆ
ಹೃದಯ ತಾಳದೆ ಮರುಗಿದೆ

ದಾರಿ ದೀಪ ನಂದಿದೆ
ಬಾಳ ದಾರಿ ಮಾಸಿದೆ
ಬರಿ ಕತ್ತಲು ಅಷ್ಟ ದಿಕ್ಕಲು
ದಿಕ್ಕಪಾಲು ನನ್ನ ಬದುಕು

ತಾರೆ ಇಲ್ಲದ ನಭೋಮಂಡಲ
ಚಂದ್ರಿಕೆ ಬಾರದ ರಾತ್ರಿ ಕಾವಳ
ನನ್ನ ಬಾಳ ದಾರಿ ಪಾಡು
ಮೌನ ಮುರಿದೊಮ್ಮೆ ಮಾತನಾಡು

ಮರುಭೂಮಿಯಲಿ ನೆರಳು ಅರಸಿ
ಬೆಂದ ಜೀವನ ನನ್ನದು
ಮನವು ನೊಂದಿದೆ ತಾಳಲಾರದೆ
ಮಾತನಾಡೊಮ್ಮೆ ಒಲವಿನ ಗೆಳತಿ

ವಿರಸವು ವಿಷಮವಾಗಿ
ಕ್ಷಣಗಳು ಯುಗಗಳಾಗಿ
ವಿರಸ ಕ್ಷಣಗಳು ಎದೆಯುತುಂಬಿ
ಮನಸು ನರಳಿದೆ ಗೆಳತಿ

ಕಾರಣ ಸಕಾರಣವು
ಕೇಳಿಸಿತು ನೂರು ಕಾರಣ
ಹೇಳಿಸಿತು ಮಿತ್ಯನೂರಾರು
ಇದ ನೀನರಿಹೆ ನನ ಗೆಳತಿ

ಕುಟಿಲವ ಯೋಚಿಸಲಿಲ್ಲ
ಕುಟಿಲ ಕಾರ್ಯವ ಮಾಡಲಿಲ್ಲ
ಕಾಲ ಪಥದಲಿ ಸಿಲುಕಿ ನನಗೆ
ಶಂಕೆಯ ವಿಷ ಸಿಂಚನ

ವ್ಯಸ ಕಾಮುಕ ನಾನಲ್ಲ
ವಿಕಟ ವರ್ತುಲ ನನಗಿಲ್ಲ
ಎನ್ನೆದೆಯ ಅನುರಾಗ
ನಿನಗಲ್ಲದೆ ಯಾರಿಗಲ್ಲ

ಕ್ಷಮೆ ಕ್ಷಮೆ ಕ್ಷಮೆ ಯಾಚಿಸುವೆ
ನಿನ್ನ ದುಃಖವು ನನ್ನ ಹೆಸರಲೆ
ಕ್ಷಮಿಸು ನೀನೊಮ್ಮೆ ಗೆಳತಿ
ಮನವು ಮಸಣವಾಗಿದೆ

ಯಾವುದೋ ಭಾವವದು
ಕದಡುತಿದೆ ನೆನಪನು
ನೆನಪೆ ಹರಿತ ಹಲಗಾಗಿ
ಸೀಳುತಿದೆ ಹೃದಯವನು

ಆಕಾಲ ಈಕಾಲ ತ್ರಿಕಾಲ
ನಿನ್ನ ಒಲವಿನ ಪೂಜೆ ಮಾಡುವ
ಪ್ರೇಮದಾಸನು ನಾನು
ವರವ ನೀಡು ಗೆಳತಿ

ಕಾದಿರುವೆ ಹಂಬಲಿಸಿ
ಕಾಯುವೆನು ಕಿವಿ ಆಲಿಸಿ
ಕೊನೆವರೆಗು ಕೇಳಲು
ನಿನ್ನ ಸವಿಮಾತೊಂದನು

ಮನ ನೊಂದಿದೆ ಗೆಳತಿ,
ಮಾತಾಡೊಮ್ಮೆ
ಮುರಿದು ಮೌನದ ಭಿತ್ತಿ
ಓ! ನನ್ನ ಒಲವಿನ ಗೆಳತಿ

ನೀನುಡಿಯೆ ಅಕ್ಕರೆಯ ಸೊಲ್ಲೊಂದು
ಮನವು ನೊಂದಿದೆ ಗೆಳತಿ
ಮಾತನಾಡೊಮ್ಮೆ ಗೆಳತಿ


*~ಕುಕೂ..


February 13, 2008

‘Ganga’, The ‘sacred’


She!! my beloved,
Is as ‘sacred’ as “ river Ganga”
It is my hurt & frustration --
which has been ‘Catalyst call’ in marring her ‘pure self’.

Free as she flew like aves spreading joy
Sits now limp, as if her wings of joy were to have touched wreck.
Again - my ill feelings take responsibility
Of slithering her down from grace to darkness

It’s me! who hit the blooming
smiley flower with ‘scorching flame’,
Its me again; who is culpable for her withered state of mind.
I thus go weak, cannot visualize her fading identity.

My heart listened to ‘others'
Misrepresentations, faulty ‘rumors’ at all once
provoked me to a misdemeanour,
spurting flames of suspicion

Immoderate cries, bouts of which have left her eyes all dried up.
To an extent I find, blood squirting those deficient eyes.
Needlessly bears the brunt of the more for ‘no’ blunder of hers.
All makes me the culprit I beg your pardon!!

I pray for amnesty from all of those
who heard my accusations on her
to be just the outcome of
“Cruel selfish intensions”

Dignity & ‘not’ scorn, this holy Ganga is to be treated with.
I vouch; she is as pure as a bee-ridden flower.
As timeless, ever fresh honey she is.
She is indeed my friend, my shiny pearl, ‘my love’!!By : Kumar Swamy
To English : Shruthi Shivakumar


ಪಾವನ-ಗಂಗಾ

ಇವಳೆನ್ನ ಗೆಳತಿಯು
ಗಂಗಾ ಜಲದಷ್ಟು ಪಾವನಳು
ವ್ಯಸನಿತ ಕುಟಿಲೆನ್ನ ಮನಸ್ಸು
ಇಟ್ಟಿತು ಇವಳ ವ್ಯಕ್ತಿತ್ವಕೆ ಕಪ್ಪು ಚುಕ್ಕಿಯನು

ಹಕ್ಕಿಯಂತೆ ಸ್ವಚ್ಛಂದದಿ ಹಾಡಿ ನಲಿತಿದ್ದವಳು
ಪುಕ್ಕ ಮುರಿದವಳಂತೆ ಮುದುಡಿ ಕುಳಿತಿಹಳು
ನನ್ನೆದೆಯಲಿ ಉಸುರಿದ ಈರ್ಷ್ಯೆಯ ಪರಿ
ಇವಳ ಬದುಕನ್ನೇ ಮಾಡಿತು ದೀನ

ನಗುತ ಅರಳುತಲಿದ್ದ ಹೂವಿಗೆ
ತಾಗಿಸಿದೆ ಮೋಹದ ಜ್ವಾಲೆಯನು
ಕಮರುತ್ತಿರುವ ಅವಳ ಮನಸ್ಥಿತಿಗೆ
ಕಾರಣನು ನಾನು,ಕೃಷವಾಗಿ ಹೋಗುವೆನು

ಆಲಿಸಿತು ಮನ ಅವರಿವರಾಡಿದ ಪಿಸುಮಾತನು
ಕೇಳಿಸಿಕೊಂಡು ಮತ್ತೆ ಇನ್ನೇನನ್ನೋ
ಮಾಡಿತು ಕುಟಿಲ ಕುಯುಕ್ತಿಯನ್ನು
ಹಚ್ಚಿತು ಸುತ್ತೆಲ್ಲರಿಗೆ ಶಂಕೆಯ ಕಿಚ್ಚನ್ನು

ರೋದಿಸಿ ರೋದಿಸಿ ಬತ್ತಿತು ಅವಳ ಕಣ್ಣೀರು
ಇಂಗಿದ ಕಣ್ಣಲ್ಲಿ ಚಿಮ್ಮಿತು ನೆತ್ತರು
ಮಾಡದ ತಪ್ಪಿಗೆ ಲೋಕದ ನಿಂದೆನೆಯು
ಇದಕ್ಕೆ ಕಾರಣನು ನಾನು, ಕ್ಷಮೆ ಕೇಳುವೆನು

ಕರಮುಗಿದು ಕೇಳುವೆನು
ಕುಟಿಲ ಕಥೆ ಕೇಳಿದ ನಿಮ್ಮೆಲ್ಲರನು
ಅವಳ ಮೇಲಿನ ಆಪಾದನೆ
ಹುಸಿ, ಕಪಟ ಸ್ವಾರ್ಥದ ಕಿಡಿಯೆಂದು

ನಿಂದಿಸದಿರಿ ತಿಳಿಯಾದ ಗಂಗೆ ಇವಳನ್ನು
ಹೂವಲ್ಲಡಗಿದ ಮಕರಂದದಷ್ಟು ಪಾವನಳು
ಅನುಗಾಲ ಕೆಡದ ಜೇನ ಹನಿ ಇವಳು
ಇವಳೆನ್ನ ಗೆಳತಿ ಮಾಣಿಕ್ಯದ ಮಣಿಯು

*~ಕುಕೂ..

ಸೃಷ್ಠಿಯ ಯೋಗಿ....|


ಬೇಸಾಯ ನೀಸಾಯವಲ್ಲವೋ

ಬೇಸಾಯ ಸಕಲ ಸಲಹುವ ಕಾಯಕ
ಸರ್ವರನು ಕಾಯುವ ಕಾಯಕವೋ
ನಿನ್ನ ಬೆವರೇ ಸಕಲರ ಸತ್ವವೋ

ಬಿಸಿಲ ಬಯಲಿಗೆ ಮೈಯೊಡ್ಡಿ ದುಡಿವೆ

ಚಳಿಯ ನಡುಕನು ಹೆದರಿಸಿ ನಡೆವೆ
ಗುಡುಗು-ಮಳೆಯಲ್ಲೂ ಮೇಳೈಸಿ ಮೆರೆವೆ
ಇದುವೆ ನಮಗೆ ಸೃಷ್ಠಿಯ ಕೊಡುಗೆ!

ಅರುಣೋದಯಕೆ ಮೊದಲ ಸ್ವಾಗತವು ನಿನ್ನದೇ

ಭೂಮಿತಾಯಿಯ ವಂದನೆಯ ಜೊತೆಗೆ
ಸಾಗುವೆ ಎಲ್ಲರ ಸಲಹುವ ಕಾಯಕದಡಿಗೆ
ಏನು ನಿನ್ನ ನಿಸ್ವಾರ್ಥದ ದುಡಿಮೆ!

ಭೂಮಿತಾಯಿಯೆ ನಿನ್ನ ಯಜ್ಞಕುಂಡ
ಸೂರ್ಯದೇವನೆ ಅಗ್ನಿ ತರ್ಪಣ
ಗುಡುಗು ಸಿಡಿಲುಗಳೆ ಜಪ ಮಂತ್ರ
ವರ್ಷಧಾರೆಯೇ ಅರ್ಪಿಸುವ ಸುಜಲ ತೀರ್ಥ

ಉಸಿರಾಗುವ ಹಸಿರ ಬೆಳೆಸಿ
ನೆರಳಾಗುವ ಮರವ ನೆಟ್ಟು
ಸೃಷ್ಠಿಗೇ ಚಂದ ಕೊಟ್ಟು ನಲಿವ
ಕಾಯಕ ಯೋಗಿವರ್ಯ ನೀನು

ಋತು ಮಾನದ ಬೇದವಿಲ್ಲದೆ
ಗತ ನೆನದು ಹೆದರಿ ಎದೆಗುಂದದೆ
ಋತ ಬದುಕು ಎಂದೂ ಮರೆಯುದೆ
ದುಡಿದು ಬದುಕು ನಡೆಸುವ ಸವ್ಯಸಾಚಿ

ಕಾಯಕವೆ ನಿನ್ನ ಅನುಗಾಲ ಜಪ
ಸೈರಣೆಯೇ ನೀನು ನಡೆಸುವ ತಪ
ಅಗಣ್ಯ ಸುಗುಣಗಳ ಮೂರ್ತ ಮೂರ್ತಿ
ಅಪಾರ ಅಮರ ಕೀರ್ತಿ ಪಾತ್ರ

ಯುಗ ಯುಗಗಳು ಉರುಳಿ ಹೋದರು
ರಾಜ್ಯ ಕೋಟೆಗಳು ಉರುಳಿ ಅಳಿದರು
ನೇಗಿಲ ಸಾಲಲಿ ಶಕ್ತಿಯ ತುಂಬುತ
ನಿಲ್ಲದೆ ನಡೆದಿದೆ ನಿನ್ನಯ ಕಾಯಕ


*~ ಕುಕೂ..

February 12, 2008

ಬರಿ ಒಂದು ಸೊಲ್ಲು ...||


ಬೋಳು ಮರ ಸೀಳಿ ಕೊನರಿದಾಂಗ
ಸೀದು ಹೋಗಿದ್ದ ಭಾವ ಏರಿಕುಂತೈತ
ನಿನ್ನ ಆದರದ ಮಾತೊಂದು ಕೇಳಿ
ಯಾತರವು ಬೇಡವೆಂದು ಮನ ನಲಿದಾಡೈತ

ಸೊಲ್ಲು ಅಡಗಿದ್ದ ಈ ಮಲ್ಲನ ಮನಸ್ಸು
ಸೇಂದಿ ಸೇವಿಸಿದಾಂಗ, ಸೊಂದಿ ಮಳುಗರುವಿನಾಂಗ
ನೀನಾಡಿದ ಪ್ರೀತಿಯ ಸೊಲ್ಲೊಂದ ಕೇಳಿ
ಸಿಗ್ಗಾ ಬಿಟ್ಟು ಹಿಗ್ಗಾ ಮುಗ್ಗಾ ನಗೆದಾಡೈತಾ

ಎತ್ತಲೋ ಜಾರಿ ಬಿಟ್ಟೇ ಹೋಗಿದ್ದ
ಈ ಪ್ರಾಣ ಮತ್ತೆ ಉಸಿರಾಡೈತ
ನಿನ್ನ ಕೊರಳ ಪಿಸುಮಾತ ಕೇಳಿ
ವ್ಯಸನವಿಲ್ಲದೆ ಗತ ಮರೆತು ಕುಣಿದಾಡೈತ

ಕಾಣೆನು ನಿನ್ನನೆಂದು ಕಳವಳದಿ ಕಂಗೆಟ್ಟಿದ್ದ ಕಣ್ಣು
ಅರಳಿಸಿ ಹುಬ್ಬೇರಿಸಿ ಹೊರಳಿಸಿ ಹೊಳೆದೈತ
ಹಾಡಹಗಲೇ ಕಾಣದೇ ಹೋಗಿದ್ದ ಬೆಳಕು
ನಿನ್ನೆದೆಯ ದ್ವನಿಯ ಕೇಳಿ ಬದುಕೇ ಹೊನಲಾಗೈತ

ಅಡವಿಯಾ ನಡುವ್ಯಾಗ ಹಾದಿ ಕಳಕೊಂಡಾಂಗ
ನಿನ ಜೊತೆ ವಿರಸದಿ ಬದುಕ ಜಾಡಾ ತಪ್ಪಿತ್ತ
ಮನಸ್ಯಾಗಿನ ಮಾತು ನೀ ಆಡಿದಾಗಿಂದ
ನಿನ ಮಾತಾ ಬದುಕಿನ ಜಾಡದೀವಿಗೆಯಾಗೈತ.

ಎಂತಾ ಮೋಡಿಯ ಮಾತು ನೀನಾಡಿದ ಮಾತು
ಎಲ್ಲಿ ಅಡಗಿತ್ತು ಯ್ಯಾಕ ಅಡಗಿತ್ತು, ಮೌನ ತಾಳಿತ್ತು
ನೀರಿಂದ ತೆಗೆತ ಮೀನಾಂಗೆ ನನ್ನ ಮನ ಒದ್ದಾಡಿತ್ತು
ಕೇಳದೆ ಎಷ್ಟೊಂದು ದಿನ ತಾವು ಇಡದು ಕುಂತಿತ್ತ


*~ ಕುಕೂ ...

ಶುಭ-ಹಾರೈಕೆ


ನಿನ್ನ ಬಾಳಿನ ವಸಂತ

ಚಿಗುರಾಗಿರಲಿ ಅನಂತ
ಹೊಸಬಾಳಿನ ಹಾದಿ
ಹಸನಾಗಿರಲಿ ನಿರಂತರ

ಒಂಟಿ ಜೀವನ ಮುಗಿಸಿ
ಜೊತೆಗೂಡುವ ಆತುರ
ಬೆಸಗೊಂಡಿರಲಿ ಭಾವ
ಬಾಳಸಂಗಾತಿಯ ಜೊತೆ

ಸರಸ ವಿರಸವು ಇರಲಿ
ಬವಣೆ ನೂರಾರು ಬರಲಿ
ನಿಮ್ಮ ಒಲವಿನ ಪಯಣ
ಅನುರಾಗದಿಂದ ತುಂಬಿರಲಿ

ಸದ್ದು ಗದ್ದಲ ತುಂಬಿದೆ
ಸಂಸಾರದ ಈ ಸಂತೆ
ಮಾಡಿಮುಗಿಸು ಸಂತೆ
ಮೌನದಿ ಬಿಟ್ಟು ಚಿಂತೆ

ನಂಬಿದವರ ಕೈಬಿಡದೆ
ಸಾಗಹಾಕು ಸಂಸಾರ
ಸರಸ ಸಲ್ಲಾಪ ಸಂಪ್ರೀತಿ
ತುಂಬಿಸಲಿ ಬದುಕಲಿ ಸಂತಸ

ಊಡಿ ಸಂಸಾರದ ಬಂಡಿ
ಗಂಡು ಹೆಣ್ಣು ಜೋತೆಗೂಡಿ
ಒಲವಿನ ಕೀಲಿಯ ಹಾಕಿ
ಜಾರದೆ ನಡೆಯುತಲಿರಲಿ

** ಕುಕೂ..

February 03, 2008

~ ಪ್ರೇರಕ~


ಇರುವನೊಬ್ಬ ನನ್ನೊಳಗೆ ಪ್ರೇರಕ
ಸದಾ ನನ್ನ ಪಾಲಿಸುವ ಪಾಲಕ
ಬಿದ್ದು ಹೋದರು ಎದ್ದುನಿಲ್ಲಿಸುವ
ಹಬ್ಬಿದ ಕತ್ತಲಲ್ಲೂ ದಾರಿ ತೋರುವ
ಅಗೋಚರವಾಗಿ ಅಡಗಿ ಮುನ್ನಡೆಸುವ
ಇರುವನೊಬ್ಬ ನನ್ನೊಳಗೆ ಪ್ರೇರಕ
ಅವನೇ ನನ್ನ ಅಂತರಾತ್ಮ

ಇರುವನೊಬ್ಬ ನನ್ನೊಳಗೆ ಪ್ರೇರಕ
ಸ್ವಾಭಿಮಾನದ ಕಿಚ್ಚು ಹಚ್ಚಿ
ಬವಣೆ ಇದ್ದರು ದಿಟ್ಟತನವ ಹೊಮ್ಮಿಸಿ
ಬದುಕಿ ನಡೆಯುವ ದಾರಿ ತೋರಿಸಿ
ನನ್ನ ಸೂತ್ರದಾರಿಯು ತಾನೆ ಆದರು
ತೋರಿಸಿಕೊಳ್ಳದೆ ಅವಿತು ನನ್ನ ಮುನ್ನಡೆಸುವ
ಇರುವನೊಬ್ಬ ನನ್ನೊಳಗೆ ಪ್ರೇರಕ
ಅವನೇ ನನ್ನ ಅಂತರಾತ್ಮ

ಇರುವನೊಬ್ಬ ನನ್ನೊಳಗೆ ಪ್ರೇರಕ
ನನಗಿಲ್ಲ ಭಯ ಇವನಿರುವತನಕ
ಯಾರ ಹಂಗಿಲ್ಲ ವಶವರ್ತಿ ನಾನಲ್ಲ
ಅಂಗ ಊನ ವಿಕಲಾಂಗನಾದರು
ಭಂಗವಿಲ್ಲ ಬದುಕಿಗೆ ಜಂಗಾಬಲವೆಲ್ಲ
ಮೆಟ್ಟುವೆ ಕಷ್ಟಗಳ ದಿಟ್ಟ ದೀರನಾಗಿ
ಮಾಡುವೆ ಕಾಯಕ ಜಟ್ಟಿಯ ಪಟುವಂತೆ
ಇದ್ದರೆ ಸಾಕು ನನ್ನೊಳಗೆ ಪ್ರೇರಕ
ಅವನೇ ನನ್ನ ಅಂತರಾತ್ಮ

ಇರುವನೊಬ್ಬ ನನ್ನೊಳಗೆ ಪ್ರೇರಕ
ದುಃಖ ಭಯ ದೀನ ಭಾವ ಅಳಿಸಿ
ದೂರ ದೂಡಿ ದುಮ್ಮಳ ಉಮ್ಮಳ
ಬೆಂಬಲವಿಟ್ಟು ಹಂಬಲಿಸುವ ನನಗೆ
ಬೆಂಬಿಡದೆ ಕಾಯುತ್ತ ಬಾಳ ದಾರಿ ತೋರುತ್ತ
ನಿರ್ಲಿಪ್ತನಿಗೆ ಚೇತನವ ತುಂಬುತ್ತ
ನಡೆಸುವ ನನ್ನನ್ನು ಅಗೋಚರ ಪ್ರೇರಕ
ಅವನೇ ನನ್ನ ಅಂತರಾತ್ಮ*~ಕುಕೂ..

January 14, 2008

ಸಂಕ್ರಾಂತಿ

ಪಥವ ಬದಲಿಸಿ ಬಾನಲ್ಲಿ ಭಾನು
ದಕ್ಷಿಣಾಯದಿಂದ ಉತ್ತರಾಯಣದ ಸಂಗಮ ಸಂಕ್ರಾತಿ

ಮೈನಡುಗಿಸುವ ಮಾಗಿಯ ಚಳಿಯ ದೂಕಿ
ಗಾಳಿಯ ಬಿಸಿಯ ಹೆಚ್ಚಿಸಿ ಮೈಮನವ ತಣಿಸುವ ಸೌಖ್ಯ ಸಂಕ್ರಾಂತಿ

ಅಂಗಳದ ತುಂಬಾ ರಂಗೋಲಿಯಿಂದ ಕಂಗೊಳಿಸಿ
ಶೃಂಗಾರ ಗೊಳ್ಳುವ ಸುಂದರ ಸೊಬಗ ಸಂಕ್ರಾಂತಿ

ಉತ್ತು ಬೆಳೆದ ಪಸಲು ರಾಶಿ ಮಾಡಿ ರೈತಾಪಿ
ಹರ್ಷದಿ ಹರ್ಷಿಸುವ ಸುಗ್ಗಿ ಸಂವೃದ್ದಿ ಸಂಕ್ರಾಂತಿ


ಎಳ್ಳು ಬೆಲ್ಲವ ಹಂಚಿ ಒಳ್ಳೆಯ ಮಾತಾಡಿ
ಎಂದು ಹಾರೈಸುವ ಸುನುಡಿಯ ಸಂಕ್ರಾಂತಿ

ಒಳ್ಳೆಯ ಗಂಡ ಸಿಗಲೆಂದು ಹರೆಯದ ಹೆಣ್ಣು
ಶ್ರದ್ದೆಯಿಂದ ಆರಾಧಿಸುವ ಸುದಿನ ಸಂಕ್ರಾಂತಿ

ಸುಮಂಗಲೆಯರು ಮನೆಮನೆಗೆ ಹೋಗಿ
ದೀರ್ಘ ಸುಮಂಗಲೆಯಾಗೆಂದು ಆಶಿಸುವ ಸುಮಂಗಲಕರ ಸಂಕ್ರಾಂತಿ

ಸೂರ್ಯನನ್ನೇ ಶೃಂಗಾರ ಮಾಡಲು
ಬಣ್ಣದ ಗಾಳಿಪಟವ ಹಾರಿಸುವ ಸಂತಸದ ಸಂಕ್ರಾಂತಿ

ನಂದಿಯ ಕೊರಳಲ್ಲಿ ಗೆಜ್ಜೆಯನು ಕಟ್ಟಿ
ಸಿಡಿ ಹಚ್ಚಿ ಓಡಿಸಿ ಸಂಭ್ರಮಿಸುವ ಸಂಕ್ರಾಂತಿ

ಎಳ್ಳು ಬೆಲ್ಲ ಹೋಳಿಗೆ ಪಂಚಕಜ್ಜಾಯ
ಬಗೆ ಬಗೆಯ ಸಿಹಿಯನು ಆಸ್ವಾದಿಸುವ ಸುಭೋಗ ಸಂಕ್ರಾಂತಿ

ತೀರ್ಥಸ್ನಾನ ಧಾನ ಜಪ ತಪ ಪೂಜಾ ಆರಾಧನೆಯಲ್ಲಿ
ಜನರೆಲ್ಲ ಸೃಷ್ಠಿಯನ್ನು ಆರಾಧಿಸುವ ಸುಪುಣ್ಯ ಸಂಕ್ರಾಂತಿ

ಸಂಗಮ ಸೌಕ್ಯ ಸೊಬಗ ಸಂವೃದ್ದಿ ಸುನುಡಿ ಸುದಿನ
ಸುಮಂಗಲ ಸಂತಸ ಸಂಭ್ರಮ ಸುಭೋಗ ಸುಪುಣ್ಯ ಸಂಕ್ರಾಂತಿ

*~ಕುಕೂ..

January 12, 2008

ಯಾರ ಶಾಪಯಾರ ಶಾಪ, ಎಲ್ಲಿಯ ಪಾಪ,
ಯಾವ ವಿಧಿಯ ಪ್ರಕೋಪ ಆಟ
ಯಾಕೋ ಇನ್ನು ಮುಗಿಯದು ಜಂಜಾಟ
ಬಿಡದು ಯಾಕಿನ್ನು ಬತ್ತಿದ ಕಾಯ ಅಂಟಿದ ಜೀವ

ಹಿಂಗಿ ಹೋದ ಬದುಕ ಸೆಲೆ
ಮರೆಯಾಗಿ ಹೋದ ಕನಸ ನೆಲೆ
ದಹಿಸುತ್ತಿರುವ ಬಡತನ ಜ್ವಾಲೆ
ಬಿಡದೆ ಬಿಗಿದಪ್ಪಿದ ಭವದ ಬಲೆ

ಹಸಿದ ಒಡಲಿಗೆ ಸಿಗದ ಕೂಳು
ಸೂರೆ ಇಲ್ಲದ ಬಾಳ ತಾವು
ಹರಿದ ಅರಿವೆ ಮುಚ್ಚಿ ಸುಕ್ಕಿನ ಕಾಯ
ಸೀದ ದೇಹಕೆ ಮುರುಟಿದ ಅಟ್ಟೆ

ವ್ಯಸ್ತ ಮನಸುಗಳ ಕುಟಿಲ ಕಾಯದೆ
ಮೆಟ್ಟಿ ನಿಂತಿದೆ ಧೀನ ಅಧೀನನ
ನೂರು ಆಹತಕೆ ನತ ದೇಹವು
ಎತ್ತ ನೋಡಲು ಸಿಕ್ಕದ ಕಾರುಣ್ಯ

ಚದುರಿ ಹೋದ ಕರುಳ ಕುಡಿಗಳ
ಮರಳಿ ಬಾರದ ಗತವ ನೆನೆದು
ಕಳೆದ ಸಂಬಂಭ ಮರಳಿ ಹುಡುಕುತ
ಕಳೆದುಕೊಂಡು ಕಣ್ಣ ಹನಿಯನು

ಮಾಡಲಾಗದು ತೊರಿದೊಂದನು
ಬಿಟ್ಟು ಹೋಗದು ಬಿಟ್ಟೆನೆಂದರು
ವ್ಯಸನ ಬದುಕಿಗೆ ಬೆಸದ ಬೇಗೆಯು
ಕುಪಿತ ಒಡಲು ವಡಬ ತಾಣವು

ಸಾಕು ಮುಗಿಸೋ ಸೂತ್ರಧಾರನೆ
ಸೂತ್ರವಾಡಿಸಿದಂತೆ ಆಡಿ ಎಲ್ಲವ
ಸವೆದು ಹೋಗಿದೆ ಜೀವ ದೇಹವು
ಸೈರಿಸಲು ಉಳಿದಿಲ್ಲ ಏನು ಶರಣಾಗುವೆ ಇಂದೇ ನಾನು.

**~ ಕುಕೂ ..

December 08, 2007

ಬಾರೋ ಅಂಗಳಕೆ...||
ಬಾರೋ ಅಂಗಳಕೆ ಓಡುತ್ತಾ ಬಾರೋ
ಬೆಳಕು ಚೆಲ್ಲಿದೆ ಧರೆಯ ತುಂಬಾ ನೋಡೋ
ಹಸಿರ ಇಸಲೆಯ ನಡುವೆ ನುಸುಳಿ ಜಾರಿಹುದು
ಬೀಸುವ ಸುಳಿಗಾಳಿಗೆ ನಾಟ್ಯವಾಡುತ ನಕ್ಕಿಹುದು

ಕೇಕೆ ಹಾಕುತ್ತ ಗೆಳೆಯರ ಕೂಗಿ ಕರೆಯೋಣ
ಹಕ್ಕಿಯ ಹಾಡಿಗೆ ತಾಳವ ಹಾಕೋಣ
ಕುಣಿ ಕುಣಿ ಕುಣಿ ಕುಣಿದು ನಲಿಯೋಣ
ಕೈಯಿಗೆ ಕೈ ಹಿಡಿದು ಸಂಗವ ಮಾಡೋಣ

ರಾಸಿ ಮರಳಿನ ಮೇಲೆ ಮೈಯ ಹಾಸೋಣ
ಸೂಸಿ ಬೀಸುವ ಗಾಳಿಯಲಿ ತೇಲಿ ಹೋಗೋಣ
ತೇಲೋ ಮೋಡ ಹಿಡಿಯಲು ಹೊಂಚ ಹಾಕೋಣ
ಹಿಡಿದು ಇಳಿಸಿ ತಂದು ಧರೆಗೆ ನೀರ ಉಣಿಸೋಣ

ಆಲದ ಮರವೇರುತ ಮರಕೋತಿ ಆಟ ಆಡೋಣ
ಮಾವಿನ ತೊಟಕೆ ನುಗ್ಗಿ ಹಣ್ಣು ಕೀಳೋಣ
ಬೆಟ್ಟದ ತುದಿಗೆ ಏರಿ ಬುಕ್ಕಿ ಹಣ್ಣು ಹುಡುಕೋಣ
ಬಾವಿ ನೀರಗೆ ಧುಮುಕಿ ಈಜಿ ತಣಿಯೋಣ

ಕೆರೆಯ ಅಂಗಳದಾಗೆ ಚಿನ್ನಿ ದಂಡವ ಆಡಿ
ಗೌಡರ ಕೇರಿಯಾಗೆ ಲಗೋರಿಯ ಹೂಡಿ
ಗುಡಿಯ ಸಾಲಲ್ಲಿ ಅವಿತು ಕಣ್ಣು ಮುಚ್ಚಾಲೆ ಆಡಿ
ಸೇರೋಣ ಮನೆಯನ್ನ ಸರ ಸರನೆ ಓಡಿ

ಬಾರೋ ಅಂಗಳಕೆ ಬೇಗ ದುಗುಡ ದೂರ ದೂಡಿ
ಹೂಡಿ ಸಾಗಿಸೋಣ ಬದುಕು ಆಡಿ ಆಡಿ


*~ ಕುಕೂ...October 10, 2007

ಬೆಪ್ಪ


ಅಕ್ಕ ನಾ ಬೆದರಿ ಬೆಪ್ಪನಾಗಿಹೆನು
ಬಾಳ ತೀರಕ್ಕೆ ಹೋಗಲಿ ಹೇಗಕ್ಕ
ಎಷ್ಟೊಂದು ಮೆಟ್ಟಿಲಿವೆ ಹತ್ತಲಿ ಹೇಗೆ
ಹತ್ತಿಹೋಗಲು ಜೊತೆಗೆ ಯಾರು ಬರುವರಕ್ಕ

ಸಾಕಿ ಸಲಹಲು ಅಪ್ಪ ಅಮ್ಮ ಇರುವರಪ್ಪ
ಆಡಿ ನಲಿಯಲು ಜೊತೆಗೆ ಗೆಳೆಯರಿಹರಪ್ಪ
ಸರಸ ವಿರಹಕ್ಕೆ ಸಂಗಾತಿ ಬರುವಳಪ್ಪ
ಕಣ್ಣಾಗಿ ಜೊತೆಗೆ ಸದಾ ನಾನಿರುವೆನಪ್ಪ

ಹಕ್ಕಿ ಪಿಕ್ಕಿಳು ಹಾಡು ಹಾಡುತ್ತಾವೆ
ಮರಗಿಡಬಳ್ಳಿಗಳು ತೂಗಿ ತಂಗಾಳಿ ಬೀಸುತ್ತಾವೆ
ಸೂರ್ಯ ಚಂದ್ರ ತಾರೆಯರು ಬೆಳಕು ಚೆಲ್ಲುತ್ತಾರಪ್ಪ
ಎಷ್ಟೆಲ್ಲ ಇದೆಯೋ ಈ ಸೃಷ್ಠಿಯ ಒಡಲಲ್ಲಿ ನೀನರಿಯೋ ಬೆಪ್ಪ

ಹಿಂದೊಂದು ಜನ್ಮದಲಿ ಜೊತೆಗಿದ್ದೆವಂತೆ
ಮುಂದೊಂದು ಜನ್ಮ ನಮಗಿದೆಯಂತೆ
ಹಿಂದು ಮುಂದುಗಳನು ನಾನರಿಯೆನಪ್ಪ
ಬೆದರದಿರು ಎಂದೆಂದು ಜನ್ಮದಂತ್ಯದವರೆಗು ನಾನಿನ್ನ ಜೊತೆಗಿರುವೆನು

ಇಷ್ಟೊಂದು ಸೊಗಸೆ ಈ ಬಾಳು ಅಕ್ಕ
ಬಾಳ ಹೊಕ್ಕಿ ನೋಡುವೆ ಇಂದೇ ನನ್ನಕ್ಕ
ಮೆಟ್ಟಿನಿಲ್ಲುವೆ ಬಂದ ನೂರು ಕಷ್ಟಗಳನ್ನೆಲ್ಲ
ಮುಟ್ಟಿ ಜಯಿಸುವೆ ಬಾಳ ತೀರವನಕ್ಕ


**~ ಕುಕೂ ~~

July 08, 2007

~~ ಚೆಲುವೆ.....|


ಮನಸ್ಸಿನಲಿದ್ದವಳ ಹೆಸರು
ಕಲ್ಲಿನ ಮೇಲೆ ಕಟೆಯುವಾಗ
ನೆನಪಿನ
ಹೂವಾಗಿ
ಎದೆಯ ಗೂಡಲ್ಲಿ ಅರಳಿ
ಬಯಕೆಯ
ನಸು ಕಂಪು ಸೂಸಿದ್ದಳು
ಪಕಳೆಗೆನ್ನೆಯ
ಚೆಲುವೆ


...ಕುಕೂ ~~
ಕುಮಾರಸ್ವಾಮಿ ಕಡಾಕೊಳ್ಳ
ಪುಣೆ
೨೩/೦೨/೨೦೦೭