February 21, 2008

ಮನವು ನೊಂದಿದೆ ಗೆಳತಿ


ಮನವು ನೊಂದಿದೆ ಗೆಳತಿ
ನನ್ನ ಮನ ನೊಂದಿದೆ ಗೆಳತಿ
ನಿನ್ನ ಮೌನದಿಂದ ಎದೆಬಿರಿದೆ
ಹೃದಯ ತಾಳದೆ ಮರುಗಿದೆ

ದಾರಿ ದೀಪ ನಂದಿದೆ
ಬಾಳ ದಾರಿ ಮಾಸಿದೆ
ಬರಿ ಕತ್ತಲು ಅಷ್ಟ ದಿಕ್ಕಲು
ದಿಕ್ಕಪಾಲು ನನ್ನ ಬದುಕು

ತಾರೆ ಇಲ್ಲದ ನಭೋಮಂಡಲ
ಚಂದ್ರಿಕೆ ಬಾರದ ರಾತ್ರಿ ಕಾವಳ
ನನ್ನ ಬಾಳ ದಾರಿ ಪಾಡು
ಮೌನ ಮುರಿದೊಮ್ಮೆ ಮಾತನಾಡು

ಮರುಭೂಮಿಯಲಿ ನೆರಳು ಅರಸಿ
ಬೆಂದ ಜೀವನ ನನ್ನದು
ಮನವು ನೊಂದಿದೆ ತಾಳಲಾರದೆ
ಮಾತನಾಡೊಮ್ಮೆ ಒಲವಿನ ಗೆಳತಿ

ವಿರಸವು ವಿಷಮವಾಗಿ
ಕ್ಷಣಗಳು ಯುಗಗಳಾಗಿ
ವಿರಸ ಕ್ಷಣಗಳು ಎದೆಯುತುಂಬಿ
ಮನಸು ನರಳಿದೆ ಗೆಳತಿ

ಕಾರಣ ಸಕಾರಣವು
ಕೇಳಿಸಿತು ನೂರು ಕಾರಣ
ಹೇಳಿಸಿತು ಮಿತ್ಯನೂರಾರು
ಇದ ನೀನರಿಹೆ ನನ ಗೆಳತಿ

ಕುಟಿಲವ ಯೋಚಿಸಲಿಲ್ಲ
ಕುಟಿಲ ಕಾರ್ಯವ ಮಾಡಲಿಲ್ಲ
ಕಾಲ ಪಥದಲಿ ಸಿಲುಕಿ ನನಗೆ
ಶಂಕೆಯ ವಿಷ ಸಿಂಚನ

ವ್ಯಸ ಕಾಮುಕ ನಾನಲ್ಲ
ವಿಕಟ ವರ್ತುಲ ನನಗಿಲ್ಲ
ಎನ್ನೆದೆಯ ಅನುರಾಗ
ನಿನಗಲ್ಲದೆ ಯಾರಿಗಲ್ಲ

ಕ್ಷಮೆ ಕ್ಷಮೆ ಕ್ಷಮೆ ಯಾಚಿಸುವೆ
ನಿನ್ನ ದುಃಖವು ನನ್ನ ಹೆಸರಲೆ
ಕ್ಷಮಿಸು ನೀನೊಮ್ಮೆ ಗೆಳತಿ
ಮನವು ಮಸಣವಾಗಿದೆ

ಯಾವುದೋ ಭಾವವದು
ಕದಡುತಿದೆ ನೆನಪನು
ನೆನಪೆ ಹರಿತ ಹಲಗಾಗಿ
ಸೀಳುತಿದೆ ಹೃದಯವನು

ಆಕಾಲ ಈಕಾಲ ತ್ರಿಕಾಲ
ನಿನ್ನ ಒಲವಿನ ಪೂಜೆ ಮಾಡುವ
ಪ್ರೇಮದಾಸನು ನಾನು
ವರವ ನೀಡು ಗೆಳತಿ

ಕಾದಿರುವೆ ಹಂಬಲಿಸಿ
ಕಾಯುವೆನು ಕಿವಿ ಆಲಿಸಿ
ಕೊನೆವರೆಗು ಕೇಳಲು
ನಿನ್ನ ಸವಿಮಾತೊಂದನು

ಮನ ನೊಂದಿದೆ ಗೆಳತಿ,
ಮಾತಾಡೊಮ್ಮೆ
ಮುರಿದು ಮೌನದ ಭಿತ್ತಿ
ಓ! ನನ್ನ ಒಲವಿನ ಗೆಳತಿ

ನೀನುಡಿಯೆ ಅಕ್ಕರೆಯ ಸೊಲ್ಲೊಂದು
ಮನವು ನೊಂದಿದೆ ಗೆಳತಿ
ಮಾತನಾಡೊಮ್ಮೆ ಗೆಳತಿ


*~ಕುಕೂ..






February 13, 2008

‘Ganga’, The ‘sacred’


She!! my beloved,
Is as ‘sacred’ as “ river Ganga”
It is my hurt & frustration --
which has been ‘Catalyst call’ in marring her ‘pure self’.

Free as she flew like aves spreading joy
Sits now limp, as if her wings of joy were to have touched wreck.
Again - my ill feelings take responsibility
Of slithering her down from grace to darkness

It’s me! who hit the blooming
smiley flower with ‘scorching flame’,
Its me again; who is culpable for her withered state of mind.
I thus go weak, cannot visualize her fading identity.

My heart listened to ‘others'
Misrepresentations, faulty ‘rumors’ at all once
provoked me to a misdemeanour,
spurting flames of suspicion

Immoderate cries, bouts of which have left her eyes all dried up.
To an extent I find, blood squirting those deficient eyes.
Needlessly bears the brunt of the more for ‘no’ blunder of hers.
All makes me the culprit I beg your pardon!!

I pray for amnesty from all of those
who heard my accusations on her
to be just the outcome of
“Cruel selfish intensions”

Dignity & ‘not’ scorn, this holy Ganga is to be treated with.
I vouch; she is as pure as a bee-ridden flower.
As timeless, ever fresh honey she is.
She is indeed my friend, my shiny pearl, ‘my love’!!



By : Kumar Swamy
To English : Shruthi Shivakumar


ಪಾವನ-ಗಂಗಾ

ಇವಳೆನ್ನ ಗೆಳತಿಯು
ಗಂಗಾ ಜಲದಷ್ಟು ಪಾವನಳು
ವ್ಯಸನಿತ ಕುಟಿಲೆನ್ನ ಮನಸ್ಸು
ಇಟ್ಟಿತು ಇವಳ ವ್ಯಕ್ತಿತ್ವಕೆ ಕಪ್ಪು ಚುಕ್ಕಿಯನು

ಹಕ್ಕಿಯಂತೆ ಸ್ವಚ್ಛಂದದಿ ಹಾಡಿ ನಲಿತಿದ್ದವಳು
ಪುಕ್ಕ ಮುರಿದವಳಂತೆ ಮುದುಡಿ ಕುಳಿತಿಹಳು
ನನ್ನೆದೆಯಲಿ ಉಸುರಿದ ಈರ್ಷ್ಯೆಯ ಪರಿ
ಇವಳ ಬದುಕನ್ನೇ ಮಾಡಿತು ದೀನ

ನಗುತ ಅರಳುತಲಿದ್ದ ಹೂವಿಗೆ
ತಾಗಿಸಿದೆ ಮೋಹದ ಜ್ವಾಲೆಯನು
ಕಮರುತ್ತಿರುವ ಅವಳ ಮನಸ್ಥಿತಿಗೆ
ಕಾರಣನು ನಾನು,ಕೃಷವಾಗಿ ಹೋಗುವೆನು

ಆಲಿಸಿತು ಮನ ಅವರಿವರಾಡಿದ ಪಿಸುಮಾತನು
ಕೇಳಿಸಿಕೊಂಡು ಮತ್ತೆ ಇನ್ನೇನನ್ನೋ
ಮಾಡಿತು ಕುಟಿಲ ಕುಯುಕ್ತಿಯನ್ನು
ಹಚ್ಚಿತು ಸುತ್ತೆಲ್ಲರಿಗೆ ಶಂಕೆಯ ಕಿಚ್ಚನ್ನು

ರೋದಿಸಿ ರೋದಿಸಿ ಬತ್ತಿತು ಅವಳ ಕಣ್ಣೀರು
ಇಂಗಿದ ಕಣ್ಣಲ್ಲಿ ಚಿಮ್ಮಿತು ನೆತ್ತರು
ಮಾಡದ ತಪ್ಪಿಗೆ ಲೋಕದ ನಿಂದೆನೆಯು
ಇದಕ್ಕೆ ಕಾರಣನು ನಾನು, ಕ್ಷಮೆ ಕೇಳುವೆನು

ಕರಮುಗಿದು ಕೇಳುವೆನು
ಕುಟಿಲ ಕಥೆ ಕೇಳಿದ ನಿಮ್ಮೆಲ್ಲರನು
ಅವಳ ಮೇಲಿನ ಆಪಾದನೆ
ಹುಸಿ, ಕಪಟ ಸ್ವಾರ್ಥದ ಕಿಡಿಯೆಂದು

ನಿಂದಿಸದಿರಿ ತಿಳಿಯಾದ ಗಂಗೆ ಇವಳನ್ನು
ಹೂವಲ್ಲಡಗಿದ ಮಕರಂದದಷ್ಟು ಪಾವನಳು
ಅನುಗಾಲ ಕೆಡದ ಜೇನ ಹನಿ ಇವಳು
ಇವಳೆನ್ನ ಗೆಳತಿ ಮಾಣಿಕ್ಯದ ಮಣಿಯು

*~ಕುಕೂ..

ಸೃಷ್ಠಿಯ ಯೋಗಿ....|


ಬೇಸಾಯ ನೀಸಾಯವಲ್ಲವೋ

ಬೇಸಾಯ ಸಕಲ ಸಲಹುವ ಕಾಯಕ
ಸರ್ವರನು ಕಾಯುವ ಕಾಯಕವೋ
ನಿನ್ನ ಬೆವರೇ ಸಕಲರ ಸತ್ವವೋ

ಬಿಸಿಲ ಬಯಲಿಗೆ ಮೈಯೊಡ್ಡಿ ದುಡಿವೆ

ಚಳಿಯ ನಡುಕನು ಹೆದರಿಸಿ ನಡೆವೆ
ಗುಡುಗು-ಮಳೆಯಲ್ಲೂ ಮೇಳೈಸಿ ಮೆರೆವೆ
ಇದುವೆ ನಮಗೆ ಸೃಷ್ಠಿಯ ಕೊಡುಗೆ!

ಅರುಣೋದಯಕೆ ಮೊದಲ ಸ್ವಾಗತವು ನಿನ್ನದೇ

ಭೂಮಿತಾಯಿಯ ವಂದನೆಯ ಜೊತೆಗೆ
ಸಾಗುವೆ ಎಲ್ಲರ ಸಲಹುವ ಕಾಯಕದಡಿಗೆ
ಏನು ನಿನ್ನ ನಿಸ್ವಾರ್ಥದ ದುಡಿಮೆ!

ಭೂಮಿತಾಯಿಯೆ ನಿನ್ನ ಯಜ್ಞಕುಂಡ
ಸೂರ್ಯದೇವನೆ ಅಗ್ನಿ ತರ್ಪಣ
ಗುಡುಗು ಸಿಡಿಲುಗಳೆ ಜಪ ಮಂತ್ರ
ವರ್ಷಧಾರೆಯೇ ಅರ್ಪಿಸುವ ಸುಜಲ ತೀರ್ಥ

ಉಸಿರಾಗುವ ಹಸಿರ ಬೆಳೆಸಿ
ನೆರಳಾಗುವ ಮರವ ನೆಟ್ಟು
ಸೃಷ್ಠಿಗೇ ಚಂದ ಕೊಟ್ಟು ನಲಿವ
ಕಾಯಕ ಯೋಗಿವರ್ಯ ನೀನು

ಋತು ಮಾನದ ಬೇದವಿಲ್ಲದೆ
ಗತ ನೆನದು ಹೆದರಿ ಎದೆಗುಂದದೆ
ಋತ ಬದುಕು ಎಂದೂ ಮರೆಯುದೆ
ದುಡಿದು ಬದುಕು ನಡೆಸುವ ಸವ್ಯಸಾಚಿ

ಕಾಯಕವೆ ನಿನ್ನ ಅನುಗಾಲ ಜಪ
ಸೈರಣೆಯೇ ನೀನು ನಡೆಸುವ ತಪ
ಅಗಣ್ಯ ಸುಗುಣಗಳ ಮೂರ್ತ ಮೂರ್ತಿ
ಅಪಾರ ಅಮರ ಕೀರ್ತಿ ಪಾತ್ರ

ಯುಗ ಯುಗಗಳು ಉರುಳಿ ಹೋದರು
ರಾಜ್ಯ ಕೋಟೆಗಳು ಉರುಳಿ ಅಳಿದರು
ನೇಗಿಲ ಸಾಲಲಿ ಶಕ್ತಿಯ ತುಂಬುತ
ನಿಲ್ಲದೆ ನಡೆದಿದೆ ನಿನ್ನಯ ಕಾಯಕ


*~ ಕುಕೂ..

February 12, 2008

ಬರಿ ಒಂದು ಸೊಲ್ಲು ...||


ಬೋಳು ಮರ ಸೀಳಿ ಕೊನರಿದಾಂಗ
ಸೀದು ಹೋಗಿದ್ದ ಭಾವ ಏರಿಕುಂತೈತ
ನಿನ್ನ ಆದರದ ಮಾತೊಂದು ಕೇಳಿ
ಯಾತರವು ಬೇಡವೆಂದು ಮನ ನಲಿದಾಡೈತ

ಸೊಲ್ಲು ಅಡಗಿದ್ದ ಈ ಮಲ್ಲನ ಮನಸ್ಸು
ಸೇಂದಿ ಸೇವಿಸಿದಾಂಗ, ಸೊಂದಿ ಮಳುಗರುವಿನಾಂಗ
ನೀನಾಡಿದ ಪ್ರೀತಿಯ ಸೊಲ್ಲೊಂದ ಕೇಳಿ
ಸಿಗ್ಗಾ ಬಿಟ್ಟು ಹಿಗ್ಗಾ ಮುಗ್ಗಾ ನಗೆದಾಡೈತಾ

ಎತ್ತಲೋ ಜಾರಿ ಬಿಟ್ಟೇ ಹೋಗಿದ್ದ
ಈ ಪ್ರಾಣ ಮತ್ತೆ ಉಸಿರಾಡೈತ
ನಿನ್ನ ಕೊರಳ ಪಿಸುಮಾತ ಕೇಳಿ
ವ್ಯಸನವಿಲ್ಲದೆ ಗತ ಮರೆತು ಕುಣಿದಾಡೈತ

ಕಾಣೆನು ನಿನ್ನನೆಂದು ಕಳವಳದಿ ಕಂಗೆಟ್ಟಿದ್ದ ಕಣ್ಣು
ಅರಳಿಸಿ ಹುಬ್ಬೇರಿಸಿ ಹೊರಳಿಸಿ ಹೊಳೆದೈತ
ಹಾಡಹಗಲೇ ಕಾಣದೇ ಹೋಗಿದ್ದ ಬೆಳಕು
ನಿನ್ನೆದೆಯ ದ್ವನಿಯ ಕೇಳಿ ಬದುಕೇ ಹೊನಲಾಗೈತ

ಅಡವಿಯಾ ನಡುವ್ಯಾಗ ಹಾದಿ ಕಳಕೊಂಡಾಂಗ
ನಿನ ಜೊತೆ ವಿರಸದಿ ಬದುಕ ಜಾಡಾ ತಪ್ಪಿತ್ತ
ಮನಸ್ಯಾಗಿನ ಮಾತು ನೀ ಆಡಿದಾಗಿಂದ
ನಿನ ಮಾತಾ ಬದುಕಿನ ಜಾಡದೀವಿಗೆಯಾಗೈತ.

ಎಂತಾ ಮೋಡಿಯ ಮಾತು ನೀನಾಡಿದ ಮಾತು
ಎಲ್ಲಿ ಅಡಗಿತ್ತು ಯ್ಯಾಕ ಅಡಗಿತ್ತು, ಮೌನ ತಾಳಿತ್ತು
ನೀರಿಂದ ತೆಗೆತ ಮೀನಾಂಗೆ ನನ್ನ ಮನ ಒದ್ದಾಡಿತ್ತು
ಕೇಳದೆ ಎಷ್ಟೊಂದು ದಿನ ತಾವು ಇಡದು ಕುಂತಿತ್ತ


*~ ಕುಕೂ ...

ಶುಭ-ಹಾರೈಕೆ


ನಿನ್ನ ಬಾಳಿನ ವಸಂತ

ಚಿಗುರಾಗಿರಲಿ ಅನಂತ
ಹೊಸಬಾಳಿನ ಹಾದಿ
ಹಸನಾಗಿರಲಿ ನಿರಂತರ

ಒಂಟಿ ಜೀವನ ಮುಗಿಸಿ
ಜೊತೆಗೂಡುವ ಆತುರ
ಬೆಸಗೊಂಡಿರಲಿ ಭಾವ
ಬಾಳಸಂಗಾತಿಯ ಜೊತೆ

ಸರಸ ವಿರಸವು ಇರಲಿ
ಬವಣೆ ನೂರಾರು ಬರಲಿ
ನಿಮ್ಮ ಒಲವಿನ ಪಯಣ
ಅನುರಾಗದಿಂದ ತುಂಬಿರಲಿ

ಸದ್ದು ಗದ್ದಲ ತುಂಬಿದೆ
ಸಂಸಾರದ ಈ ಸಂತೆ
ಮಾಡಿಮುಗಿಸು ಸಂತೆ
ಮೌನದಿ ಬಿಟ್ಟು ಚಿಂತೆ

ನಂಬಿದವರ ಕೈಬಿಡದೆ
ಸಾಗಹಾಕು ಸಂಸಾರ
ಸರಸ ಸಲ್ಲಾಪ ಸಂಪ್ರೀತಿ
ತುಂಬಿಸಲಿ ಬದುಕಲಿ ಸಂತಸ

ಊಡಿ ಸಂಸಾರದ ಬಂಡಿ
ಗಂಡು ಹೆಣ್ಣು ಜೋತೆಗೂಡಿ
ಒಲವಿನ ಕೀಲಿಯ ಹಾಕಿ
ಜಾರದೆ ನಡೆಯುತಲಿರಲಿ

** ಕುಕೂ..

February 03, 2008

~ ಪ್ರೇರಕ~


ಇರುವನೊಬ್ಬ ನನ್ನೊಳಗೆ ಪ್ರೇರಕ
ಸದಾ ನನ್ನ ಪಾಲಿಸುವ ಪಾಲಕ
ಬಿದ್ದು ಹೋದರು ಎದ್ದುನಿಲ್ಲಿಸುವ
ಹಬ್ಬಿದ ಕತ್ತಲಲ್ಲೂ ದಾರಿ ತೋರುವ
ಅಗೋಚರವಾಗಿ ಅಡಗಿ ಮುನ್ನಡೆಸುವ
ಇರುವನೊಬ್ಬ ನನ್ನೊಳಗೆ ಪ್ರೇರಕ
ಅವನೇ ನನ್ನ ಅಂತರಾತ್ಮ

ಇರುವನೊಬ್ಬ ನನ್ನೊಳಗೆ ಪ್ರೇರಕ
ಸ್ವಾಭಿಮಾನದ ಕಿಚ್ಚು ಹಚ್ಚಿ
ಬವಣೆ ಇದ್ದರು ದಿಟ್ಟತನವ ಹೊಮ್ಮಿಸಿ
ಬದುಕಿ ನಡೆಯುವ ದಾರಿ ತೋರಿಸಿ
ನನ್ನ ಸೂತ್ರದಾರಿಯು ತಾನೆ ಆದರು
ತೋರಿಸಿಕೊಳ್ಳದೆ ಅವಿತು ನನ್ನ ಮುನ್ನಡೆಸುವ
ಇರುವನೊಬ್ಬ ನನ್ನೊಳಗೆ ಪ್ರೇರಕ
ಅವನೇ ನನ್ನ ಅಂತರಾತ್ಮ

ಇರುವನೊಬ್ಬ ನನ್ನೊಳಗೆ ಪ್ರೇರಕ
ನನಗಿಲ್ಲ ಭಯ ಇವನಿರುವತನಕ
ಯಾರ ಹಂಗಿಲ್ಲ ವಶವರ್ತಿ ನಾನಲ್ಲ
ಅಂಗ ಊನ ವಿಕಲಾಂಗನಾದರು
ಭಂಗವಿಲ್ಲ ಬದುಕಿಗೆ ಜಂಗಾಬಲವೆಲ್ಲ
ಮೆಟ್ಟುವೆ ಕಷ್ಟಗಳ ದಿಟ್ಟ ದೀರನಾಗಿ
ಮಾಡುವೆ ಕಾಯಕ ಜಟ್ಟಿಯ ಪಟುವಂತೆ
ಇದ್ದರೆ ಸಾಕು ನನ್ನೊಳಗೆ ಪ್ರೇರಕ
ಅವನೇ ನನ್ನ ಅಂತರಾತ್ಮ

ಇರುವನೊಬ್ಬ ನನ್ನೊಳಗೆ ಪ್ರೇರಕ
ದುಃಖ ಭಯ ದೀನ ಭಾವ ಅಳಿಸಿ
ದೂರ ದೂಡಿ ದುಮ್ಮಳ ಉಮ್ಮಳ
ಬೆಂಬಲವಿಟ್ಟು ಹಂಬಲಿಸುವ ನನಗೆ
ಬೆಂಬಿಡದೆ ಕಾಯುತ್ತ ಬಾಳ ದಾರಿ ತೋರುತ್ತ
ನಿರ್ಲಿಪ್ತನಿಗೆ ಚೇತನವ ತುಂಬುತ್ತ
ನಡೆಸುವ ನನ್ನನ್ನು ಅಗೋಚರ ಪ್ರೇರಕ
ಅವನೇ ನನ್ನ ಅಂತರಾತ್ಮ



*~ಕುಕೂ..