February 13, 2008

ಸೃಷ್ಠಿಯ ಯೋಗಿ....|


ಬೇಸಾಯ ನೀಸಾಯವಲ್ಲವೋ

ಬೇಸಾಯ ಸಕಲ ಸಲಹುವ ಕಾಯಕ
ಸರ್ವರನು ಕಾಯುವ ಕಾಯಕವೋ
ನಿನ್ನ ಬೆವರೇ ಸಕಲರ ಸತ್ವವೋ

ಬಿಸಿಲ ಬಯಲಿಗೆ ಮೈಯೊಡ್ಡಿ ದುಡಿವೆ

ಚಳಿಯ ನಡುಕನು ಹೆದರಿಸಿ ನಡೆವೆ
ಗುಡುಗು-ಮಳೆಯಲ್ಲೂ ಮೇಳೈಸಿ ಮೆರೆವೆ
ಇದುವೆ ನಮಗೆ ಸೃಷ್ಠಿಯ ಕೊಡುಗೆ!

ಅರುಣೋದಯಕೆ ಮೊದಲ ಸ್ವಾಗತವು ನಿನ್ನದೇ

ಭೂಮಿತಾಯಿಯ ವಂದನೆಯ ಜೊತೆಗೆ
ಸಾಗುವೆ ಎಲ್ಲರ ಸಲಹುವ ಕಾಯಕದಡಿಗೆ
ಏನು ನಿನ್ನ ನಿಸ್ವಾರ್ಥದ ದುಡಿಮೆ!

ಭೂಮಿತಾಯಿಯೆ ನಿನ್ನ ಯಜ್ಞಕುಂಡ
ಸೂರ್ಯದೇವನೆ ಅಗ್ನಿ ತರ್ಪಣ
ಗುಡುಗು ಸಿಡಿಲುಗಳೆ ಜಪ ಮಂತ್ರ
ವರ್ಷಧಾರೆಯೇ ಅರ್ಪಿಸುವ ಸುಜಲ ತೀರ್ಥ

ಉಸಿರಾಗುವ ಹಸಿರ ಬೆಳೆಸಿ
ನೆರಳಾಗುವ ಮರವ ನೆಟ್ಟು
ಸೃಷ್ಠಿಗೇ ಚಂದ ಕೊಟ್ಟು ನಲಿವ
ಕಾಯಕ ಯೋಗಿವರ್ಯ ನೀನು

ಋತು ಮಾನದ ಬೇದವಿಲ್ಲದೆ
ಗತ ನೆನದು ಹೆದರಿ ಎದೆಗುಂದದೆ
ಋತ ಬದುಕು ಎಂದೂ ಮರೆಯುದೆ
ದುಡಿದು ಬದುಕು ನಡೆಸುವ ಸವ್ಯಸಾಚಿ

ಕಾಯಕವೆ ನಿನ್ನ ಅನುಗಾಲ ಜಪ
ಸೈರಣೆಯೇ ನೀನು ನಡೆಸುವ ತಪ
ಅಗಣ್ಯ ಸುಗುಣಗಳ ಮೂರ್ತ ಮೂರ್ತಿ
ಅಪಾರ ಅಮರ ಕೀರ್ತಿ ಪಾತ್ರ

ಯುಗ ಯುಗಗಳು ಉರುಳಿ ಹೋದರು
ರಾಜ್ಯ ಕೋಟೆಗಳು ಉರುಳಿ ಅಳಿದರು
ನೇಗಿಲ ಸಾಲಲಿ ಶಕ್ತಿಯ ತುಂಬುತ
ನಿಲ್ಲದೆ ನಡೆದಿದೆ ನಿನ್ನಯ ಕಾಯಕ


*~ ಕುಕೂ..

No comments: