April 05, 2008

** ಒಲವ ಸುಮ ಅರಳಲು **


ಬೆಚ್ಚಿರುವೆ ಯಾಕೆ ನನ್ನಕ್ಕರೆಯ ಸುಮವೆ
ನಾನೇಗೆ ನಲಿಯಲಿ ನೀ ದುಃಖಿಯಾದರೆ
ನಿನ್ನ ದುಃಖಕ್ಕೆ ಕಾರಣವ ತಿಳಿಸು
ಕೋಟಿ ಕಷ್ಟಮೆಟ್ಟಿ ನಗುವ ಹೊತ್ತುತರುವೆನು

ಇರಲಿ ನೂರು ಅಡೆತಡೆ ಕೆಡುಕುಗಳು
ಜಾಲವೆ ಬೀಸಿದರು ನುಗ್ಗಿ ಬಿಡುವೆನು
ಪ್ರಾಣವನೆ ಕೇಳಿದರು ಒತ್ತೆ ಇಡುವೆನು
ನಿನ್ನ ದುಃಖವನು ನಾದೂರಮಾಡಲು

ಮಿಟುಕಿ ಹಾಕುವೆನು ಕುಟಿಲ ಕೆಡುಕುಗಳನು
ಈಸುವೆನು ನೋವಿನ ಸೆಳುವು ಇದಿರಾದರು
ನಿನ್ನ ನಗುವಿಗಾಗಿ ಹಂಗುತೊರೆವೆನು
ವಿಷವಾದರು ಕುಡಿವೆನು ಅಮೃತವೆಂದು

ಸುಡುಬಿಸಿಲಿದ್ದರೆ ನೆರಳಾಗಿ ಬರುವೆ
ಮರುಭೂಮಿ ಧಗೆಯಲ್ಲಿ ನೀರಾಗಿ ತನಿಸುವೆ
ಸಾವಿರ ನೋವಿದ್ದರು ನಿಶ್ಚಿಂತೆಯಲಿ ನುಂಗುವೆ
ತಿಳಿಸು ನಿನ್ನ ನೋವಿನ ಕಾರಣವನಿಂದು

ನಿನ್ನ ಕಂಗಳು ಹನಿದರೆ ನನ್ನೆದೆ ಬತ್ತುವುದು
ನೀರೋದಿಸಿದರೆ ನನ್ನುಸಿರು ಕಟ್ಟುವುದು
ಅಳುಮೋರೆ ಕಂಡೆನ್ನ ಬದುಕೆಲ್ಲ ಕಾವಳವು
ನಿನ್ನ ನೋವನರಿತೆನ್ನೋಡಲು ವಡಬಾನಲವು

ನೀಹೇಳದಿದ್ದರು ಅರಿವುದೆನ್ನ ಹೃದಯವು
ನಿನ್ನೆದೆಯ ಮೊನಚು ನೋವಿನಾಳವನು
ನಾತಾಳಲಾರೆ ಅದುಯಾವ ಜನ್ಮದನಂಟೋ
ನೀದುಃಖಿಯಾದರೆ ಮನ ಅತ್ತುಬಿಡುವುದು

ಏರು ಇಳಿತಗಳ ನಡುವೆ ಇದ್ದರು ಜಾಡು
ನೋವು ನಲಿವಿನ ಅರಿವಿನಲಿ ನಡೆದೆರೆ
ಬಲುಸೊಗಸು ನೋಡು ಬಾಳಪಯಣವು
ಅಳಬೇಡ ನನ ಗೆಣತಿ ಬದುಕು ಬಲುಚಂದ

ನಿನ್ನ ನಗುವೆ ಹೂವಿನಾ ಮಂದಹಾಸವು
ಕಾದಿರುವೆನು ಬಿರಿದರಳುವ ಹೂವನೋಡಲು
ನಕ್ಕುಬಿಡುವೊಮ್ಮೆ ಒಲವ ಸುಮ ಅರಳಲು
ಸಾಕು ನನಗದೊಂದೆ ಬೇರೇನು ಬೇಡೆನು

** ಕುಕೂ....

No comments: