July 10, 2008

ಒಂಟಿತನ!

ಹುಣ್ಣಿಮೆಯ ಕಂಡ ಸಾಗರದಂತೆ
ಉಕ್ಕಿಹುದು ಬೇಸರಿಕೆ, ಮನದಾಳದಿ
ದಾರಿತಪ್ಪಿದ ಗಿಳಿರಾಮನಂತೆ ಮನ
ಮುಗಿಲ್ಲೆಲ್ಲೊ ದಿಕ್ಕುತಪ್ಪಿ ಅಲೆದಿಹುದು.

ಕದಡಿದ ಕೊಳದ ಬಿಂಬದಂತೆ

ಮುದುಡಿ ಹೋಗುತಿಹದು ಮನವು
ಕೆರಳಿದ ಗಿಡುಗನ ಕೈಗೆ ಸಿಕ್ಕಪಾರಿವಾಳ
ಒಂಟಿಯಾಗಿ ನರಳುತಿಹುದು

ಗಾವುದ ಗಾವುದ ದೂರದಲ್ಲಿರುವ

ತನ್ನ ನೆಲೆಯನು ನೆನೆದಿಹುದು
ಮನ ಗುಮ್ಮನಂತೆ ಸುಮ್ಮನೆ ಕುಳಿತು
ಗುಟ್ಟಾಗಿ ಬೆಪ್ಪನೆ ದುಃಖಿಸಿಹುದು.

ಗಳಿ-ಗಳಿಗೆಯು ಗತಿಸಿದಾವುದನ್ನೋ

ನೆನೆದು ಹಿತವಿಲ್ಲದೆ ಗತವನ್ನೇ ಕೆದಕಿ
ಮಿತಿ ಇಲ್ಲದೆ ಮತ್ತಲೋ ಮಿಡಿದು
ಮೌನಿಸಿ ಮನದಲ್ಲೇ ಕನವರಿಸಿಹುದು.

ಒಲ್ಲದು ಹೊನ್ನು ಅನ್ನ ಮತ್ತೊಂದು

ಬಲ್ಲದು ಎಲ್ಲದರ ಮಹದಾನಂದ
ಬಯಸಿದೆ ಮನ ಸದಾನಂದ
ತಾಳಲಾರದೆ ಈ ಒಂಟಿತನ!

ತನ್ನವರ ನೆನದು ತವಕಿಸಿಹುದು

ಕಾಣುವ ಹಂಬಲವ ಕೋರಿ
ಬಾನೆತ್ತರಕ್ಕೆ ಕಂಗಳ ನೆಟ್ಟಿಹುದು
ಕಾಣುವೆನೆಂಬುದ ನೆನದು
ಕಣ್ಣಂಚಲಿ ಮಿಂಚು ಹೊಳೆದಿಹುದು.

**ಕುಕೂಊ..