December 08, 2007

ಬಾರೋ ಅಂಗಳಕೆ...||




ಬಾರೋ ಅಂಗಳಕೆ ಓಡುತ್ತಾ ಬಾರೋ
ಬೆಳಕು ಚೆಲ್ಲಿದೆ ಧರೆಯ ತುಂಬಾ ನೋಡೋ
ಹಸಿರ ಇಸಲೆಯ ನಡುವೆ ನುಸುಳಿ ಜಾರಿಹುದು
ಬೀಸುವ ಸುಳಿಗಾಳಿಗೆ ನಾಟ್ಯವಾಡುತ ನಕ್ಕಿಹುದು

ಕೇಕೆ ಹಾಕುತ್ತ ಗೆಳೆಯರ ಕೂಗಿ ಕರೆಯೋಣ
ಹಕ್ಕಿಯ ಹಾಡಿಗೆ ತಾಳವ ಹಾಕೋಣ
ಕುಣಿ ಕುಣಿ ಕುಣಿ ಕುಣಿದು ನಲಿಯೋಣ
ಕೈಯಿಗೆ ಕೈ ಹಿಡಿದು ಸಂಗವ ಮಾಡೋಣ

ರಾಸಿ ಮರಳಿನ ಮೇಲೆ ಮೈಯ ಹಾಸೋಣ
ಸೂಸಿ ಬೀಸುವ ಗಾಳಿಯಲಿ ತೇಲಿ ಹೋಗೋಣ
ತೇಲೋ ಮೋಡ ಹಿಡಿಯಲು ಹೊಂಚ ಹಾಕೋಣ
ಹಿಡಿದು ಇಳಿಸಿ ತಂದು ಧರೆಗೆ ನೀರ ಉಣಿಸೋಣ

ಆಲದ ಮರವೇರುತ ಮರಕೋತಿ ಆಟ ಆಡೋಣ
ಮಾವಿನ ತೊಟಕೆ ನುಗ್ಗಿ ಹಣ್ಣು ಕೀಳೋಣ
ಬೆಟ್ಟದ ತುದಿಗೆ ಏರಿ ಬುಕ್ಕಿ ಹಣ್ಣು ಹುಡುಕೋಣ
ಬಾವಿ ನೀರಗೆ ಧುಮುಕಿ ಈಜಿ ತಣಿಯೋಣ

ಕೆರೆಯ ಅಂಗಳದಾಗೆ ಚಿನ್ನಿ ದಂಡವ ಆಡಿ
ಗೌಡರ ಕೇರಿಯಾಗೆ ಲಗೋರಿಯ ಹೂಡಿ
ಗುಡಿಯ ಸಾಲಲ್ಲಿ ಅವಿತು ಕಣ್ಣು ಮುಚ್ಚಾಲೆ ಆಡಿ
ಸೇರೋಣ ಮನೆಯನ್ನ ಸರ ಸರನೆ ಓಡಿ

ಬಾರೋ ಅಂಗಳಕೆ ಬೇಗ ದುಗುಡ ದೂರ ದೂಡಿ
ಹೂಡಿ ಸಾಗಿಸೋಣ ಬದುಕು ಆಡಿ ಆಡಿ


*~ ಕುಕೂ...



October 10, 2007

ಬೆಪ್ಪ


ಅಕ್ಕ ನಾ ಬೆದರಿ ಬೆಪ್ಪನಾಗಿಹೆನು
ಬಾಳ ತೀರಕ್ಕೆ ಹೋಗಲಿ ಹೇಗಕ್ಕ
ಎಷ್ಟೊಂದು ಮೆಟ್ಟಿಲಿವೆ ಹತ್ತಲಿ ಹೇಗೆ
ಹತ್ತಿಹೋಗಲು ಜೊತೆಗೆ ಯಾರು ಬರುವರಕ್ಕ

ಸಾಕಿ ಸಲಹಲು ಅಪ್ಪ ಅಮ್ಮ ಇರುವರಪ್ಪ
ಆಡಿ ನಲಿಯಲು ಜೊತೆಗೆ ಗೆಳೆಯರಿಹರಪ್ಪ
ಸರಸ ವಿರಹಕ್ಕೆ ಸಂಗಾತಿ ಬರುವಳಪ್ಪ
ಕಣ್ಣಾಗಿ ಜೊತೆಗೆ ಸದಾ ನಾನಿರುವೆನಪ್ಪ

ಹಕ್ಕಿ ಪಿಕ್ಕಿಳು ಹಾಡು ಹಾಡುತ್ತಾವೆ
ಮರಗಿಡಬಳ್ಳಿಗಳು ತೂಗಿ ತಂಗಾಳಿ ಬೀಸುತ್ತಾವೆ
ಸೂರ್ಯ ಚಂದ್ರ ತಾರೆಯರು ಬೆಳಕು ಚೆಲ್ಲುತ್ತಾರಪ್ಪ
ಎಷ್ಟೆಲ್ಲ ಇದೆಯೋ ಈ ಸೃಷ್ಠಿಯ ಒಡಲಲ್ಲಿ ನೀನರಿಯೋ ಬೆಪ್ಪ

ಹಿಂದೊಂದು ಜನ್ಮದಲಿ ಜೊತೆಗಿದ್ದೆವಂತೆ
ಮುಂದೊಂದು ಜನ್ಮ ನಮಗಿದೆಯಂತೆ
ಹಿಂದು ಮುಂದುಗಳನು ನಾನರಿಯೆನಪ್ಪ
ಬೆದರದಿರು ಎಂದೆಂದು ಜನ್ಮದಂತ್ಯದವರೆಗು ನಾನಿನ್ನ ಜೊತೆಗಿರುವೆನು

ಇಷ್ಟೊಂದು ಸೊಗಸೆ ಈ ಬಾಳು ಅಕ್ಕ
ಬಾಳ ಹೊಕ್ಕಿ ನೋಡುವೆ ಇಂದೇ ನನ್ನಕ್ಕ
ಮೆಟ್ಟಿನಿಲ್ಲುವೆ ಬಂದ ನೂರು ಕಷ್ಟಗಳನ್ನೆಲ್ಲ
ಮುಟ್ಟಿ ಜಯಿಸುವೆ ಬಾಳ ತೀರವನಕ್ಕ


**~ ಕುಕೂ ~~

July 08, 2007

~~ ಚೆಲುವೆ.....|


ಮನಸ್ಸಿನಲಿದ್ದವಳ ಹೆಸರು
ಕಲ್ಲಿನ ಮೇಲೆ ಕಟೆಯುವಾಗ
ನೆನಪಿನ
ಹೂವಾಗಿ
ಎದೆಯ ಗೂಡಲ್ಲಿ ಅರಳಿ
ಬಯಕೆಯ
ನಸು ಕಂಪು ಸೂಸಿದ್ದಳು
ಪಕಳೆಗೆನ್ನೆಯ
ಚೆಲುವೆ


...ಕುಕೂ ~~
ಕುಮಾರಸ್ವಾಮಿ ಕಡಾಕೊಳ್ಳ
ಪುಣೆ
೨೩/೦೨/೨೦೦೭