May 31, 2008

** ಚಲ್ಲ ಮುಖ **

ಎಂದೋ ಕಂಡಕನಸಿನ
ಚಿತ್ರಗಳನ್ನ
ನೆನಪಿನ ಪರೆದೆಯ ಹಿಂದೆ
ಸರಿಸಿಟ್ಟಿದ್ದೆ
ಇಂದು ಪರೆದೆ ತೆರೆಗೊಳಿಸಿ ನೋಡಿದರೆ
ಎಲ್ಲೆಲ್ಲೂ ನಿನ್ನದೇ

'ಚಲ್ಲ ಮುಖ'

ಚಲ್ಲ- ನಗು

** ಕುಕೂಊ...

May 16, 2008

ನನ್ನ ಮುದ್ದು ಚಂದಿರ

ರಾತ್ರಿ ಹೊತ್ತಾಗೆ ಅಂಗಳದ ಬಯಲಾಗೆ
ಅವ್ವನ ಬಗಲಲ್ಲಿ ಎದೆಹಾಲು ಕುಡಿಯುತ್ತ
ಈ ಲೋಕ ಮರೆತು ನಾ ಮೇಲೆ ನೋಡಲು
ತೇಲೋ ಮೋಡದ ಮರೆಯಲ್ಲಿ ಇಣುಕಿ
ಬಾ ಎಂದು ನನ್ನ ಕರೆದಿದ್ದವನೇ
ನಿನ್ನ ಈ ಮೂದೇವಿ ಬಿಂದಿಗೆ ಚಂದಿರ

ಹಳ್ಳಾದ ದಂಡ್ಯಾಗೆ ಮಳ್ಳ ನಾ ಕುಳಿತಾಗ
ಬೆಳ್ಳಗೆ ಹೊಳೆಯುತ್ತ ಬಿಂಬದಾಗೆ ಕಾಣುತಿದ್ದ,
ನನ್ನೂರಿಂದ ನಿನ್ನೂರಿಗೆ ರಾತ್ರಿ ಹೊತ್ತಲ್ಲಿ
ನಾ ನಡೆದೋಗುವಾಗ ಬಿಡದೆ ಜೊತೆಯಲಿ ಬರುತ್ತಿದ್ದ
ನಿನ್ನ ಎದೆ ಉರಿಯ ಕಾರಣ ನನ್ನ ಬಿಂಬ ಚಂದಿರ

ನನ್ನೀ ಯೌವನದ ಮಾಯಾವಿ ಯಾತನೆಯಲ್ಲಿ
ಮೈಮರೆತು ಕನಸು ನೂರು ಕಾಣುವಾಗ
ಕಾಣದ ಒಲವಿನ ಗೆಳತಿಯ(ನಿನ್ನ) ನವುರು ರೂಪವನು
ತನ್ನ ಮೊಗದಲ್ಲೇ ತಂಪುಕಿರಣ ಬಾಣದಿಂದ ತೂರುತ್ತಾನೆ
ವೈಯಾರಿ ನಿನ್ನ ಸಿಡುಕಿನ ಕಾರಣ ನನ್ನ ಮುದ್ದು ಚಂದಿರ

ಬೇಡೆವೆಂದರು ನನ್ನ ಎದೆಯಲ್ಲಿ ಮೂಡಿ
ನನ್ನ ಹರಕು ಕವಿತೆಯ ಸಾಲಲ್ಲಿ ಬಂದು
ಬೆಳೆಕಿನ ಗೆರೆ ಎಳೆದು ನಗುತಾನೆ
ಎಲ್ಲೆಲ್ಲೋ ಅವನೇ ಮೂಡಿ ನಿನ್ನ ಕಾಣಿಸುತ್ತಾನೆ
ನೀನು ಮೂದಲಿಸುವ ನನ್ನ ಈ ತಂಪು ಚಂದಿರ

ನನ್ನ ಕವಿತೆಯ ಭಾವರೂಪವಾಗಿ
ಒಲವಿನ ಗೆಳತಿಯ ನೆನಪಿಗೆ ಬೆಳಕಾಗಿ
ನೊಂದ ಮನಸ್ಸಿಗೆ ಸಾಂತ್ವಾನ ಹೇಳಿ
ಒಂಟಿ ಮನಸ್ಸಿಗೆ ನಂಟಿನ ಗೆಳೆಯನಾಗಿ
ಎಲ್ಲೆಲ್ಲೋ ಯಾವಾಗಲೋ ಸದ್ದಿಲ್ಲದೆ
ಬಂದಿರುತ್ತಾನೆನನ್ನ ಕವಿತೆಯಲಿ ನಿನ್ನ
ವಕ್ರದ ಕಾರಣ ನನ್ನ ಭಾವ ಚಂದಿರ

** ಕುಕೂ..

May 09, 2008

ಚೆಲುವೆ ಚನ್ನಿ

ಚೆಲುವೆ ಚನ್ನಿ ಚಂದುಳ್ಳಿ ಚೆಲುವೆ
ಎಂತ ಹಸನ ನಿನ್ನ ಮಳ್ಳಿಯ ಮಾತ
ಮಳ್ಳಿ ಮಳ್ಳಿ ಮಂಚಕ್ಕೆ ಕಾಲೆಷ್ಟು
ಮೂರು ಮತ್ತೊಂದು ಎನ್ನೋ ಬೆಡಗಿನಲಿತ್ತು

ಮುಟ್ಟಿದರೆ ಮುನಿಯುವ ಗಿಡದಾಂಗೆ ನಿನಮನಸು
ಮುನಿಮುನಿದು ಮುದುಡಿ ಮತ್ತೇ ಬಿಡಿಯಾಗುತೈತ
ಮುನಿಸ್ಯಾಕೆ ಬಿರುಸ್ಯಾಕೆ ಸೊಗಸೀನ ನಗಿ ಸೂಸ
ನೆತ್ತಿಮ್ಯಾಲಿನ ಬಿದಿಗಿ ಚಂದ್ರ ನಾಚಿಬಿಡುವಾಂಗ

ಅದಲ್ಲೋ ದಾಸಯ್ಯ ಇದೆಂದು ಹೇಳಿದರು
ಅದೇಗುಡಿಯಾ ಮುಂದೆ ಟಿಂಗ ಟಿಂಗ ಎಂದ
ಎಂಬಾ ಮಾತಾಂಗ ಕಿಡಿಗೇಡಿ ನನಮನಸು
ಬುಸುಗುಟ್ಟುವ ನಿನಮನಸು ತಡವಿಕುಂತೈತ

ಕತ್ತೇಬಾಲದ ಜೊತೆ ಕುದುರೆ ಜುಟ್ಟಿಡಿದ
ನಿನ್ನ ನುಡಿಗುಟ್ಟು ಮಿಡುಕಾಡಿ ನನ್ನುಡುಕೈತ
ಕಡುಜಾಣೆ ಕಡ್ಲೆಬಟ್ಲು ನಿನ ಸಿಡುಕಕಂಡು
ಬಂದದಾರಿಗೆ ಸುಂಕವಿಲ್ಲದೆ ಮಂಕಾಗಿ ಕುಂತೈತ

ಎತ್ತು ಏರಿಗೆಳದರೆ ಕೋಣ ನೀರಿಗೆಳಿತಂತೆ
ನನಮನಸ್ಸು ಒಲವಿನಮಾತು ಕೇಳ್ತೈತ
ನಿನಮನಸ್ಸು ಸೇಡಿನ ಜಾಡು ಹಿಡಿದೈತ
ಇಂತಿರಲು ಬದುಕು ನಡೆಸುವುದೆಂತ ನೀಹೇಳ ಗಣತಿ

ಎನೇ ಆದರು ನೀನು ನನ್ನೊಲವ ಚೆಲುವೆ
ಬಿಟ್ಟುಕೊಡುವೆನಿಂದು ನನಗಟ್ಟಿವಾದವನು
ನಿನ್ನೆಮ್ಮೆ ಮಂದಿರಲಿ ನನಕೋಣ ಹಿಂದಿರಲಿ
ಮನ್ನಿಸಿ ಒಲವತೋರೊಮ್ಮೆ ಇನ್ನೂಸಿಡುಕ್ಯಾಕ

~~ ಕುಕೂ..