May 09, 2008

ಚೆಲುವೆ ಚನ್ನಿ

ಚೆಲುವೆ ಚನ್ನಿ ಚಂದುಳ್ಳಿ ಚೆಲುವೆ
ಎಂತ ಹಸನ ನಿನ್ನ ಮಳ್ಳಿಯ ಮಾತ
ಮಳ್ಳಿ ಮಳ್ಳಿ ಮಂಚಕ್ಕೆ ಕಾಲೆಷ್ಟು
ಮೂರು ಮತ್ತೊಂದು ಎನ್ನೋ ಬೆಡಗಿನಲಿತ್ತು

ಮುಟ್ಟಿದರೆ ಮುನಿಯುವ ಗಿಡದಾಂಗೆ ನಿನಮನಸು
ಮುನಿಮುನಿದು ಮುದುಡಿ ಮತ್ತೇ ಬಿಡಿಯಾಗುತೈತ
ಮುನಿಸ್ಯಾಕೆ ಬಿರುಸ್ಯಾಕೆ ಸೊಗಸೀನ ನಗಿ ಸೂಸ
ನೆತ್ತಿಮ್ಯಾಲಿನ ಬಿದಿಗಿ ಚಂದ್ರ ನಾಚಿಬಿಡುವಾಂಗ

ಅದಲ್ಲೋ ದಾಸಯ್ಯ ಇದೆಂದು ಹೇಳಿದರು
ಅದೇಗುಡಿಯಾ ಮುಂದೆ ಟಿಂಗ ಟಿಂಗ ಎಂದ
ಎಂಬಾ ಮಾತಾಂಗ ಕಿಡಿಗೇಡಿ ನನಮನಸು
ಬುಸುಗುಟ್ಟುವ ನಿನಮನಸು ತಡವಿಕುಂತೈತ

ಕತ್ತೇಬಾಲದ ಜೊತೆ ಕುದುರೆ ಜುಟ್ಟಿಡಿದ
ನಿನ್ನ ನುಡಿಗುಟ್ಟು ಮಿಡುಕಾಡಿ ನನ್ನುಡುಕೈತ
ಕಡುಜಾಣೆ ಕಡ್ಲೆಬಟ್ಲು ನಿನ ಸಿಡುಕಕಂಡು
ಬಂದದಾರಿಗೆ ಸುಂಕವಿಲ್ಲದೆ ಮಂಕಾಗಿ ಕುಂತೈತ

ಎತ್ತು ಏರಿಗೆಳದರೆ ಕೋಣ ನೀರಿಗೆಳಿತಂತೆ
ನನಮನಸ್ಸು ಒಲವಿನಮಾತು ಕೇಳ್ತೈತ
ನಿನಮನಸ್ಸು ಸೇಡಿನ ಜಾಡು ಹಿಡಿದೈತ
ಇಂತಿರಲು ಬದುಕು ನಡೆಸುವುದೆಂತ ನೀಹೇಳ ಗಣತಿ

ಎನೇ ಆದರು ನೀನು ನನ್ನೊಲವ ಚೆಲುವೆ
ಬಿಟ್ಟುಕೊಡುವೆನಿಂದು ನನಗಟ್ಟಿವಾದವನು
ನಿನ್ನೆಮ್ಮೆ ಮಂದಿರಲಿ ನನಕೋಣ ಹಿಂದಿರಲಿ
ಮನ್ನಿಸಿ ಒಲವತೋರೊಮ್ಮೆ ಇನ್ನೂಸಿಡುಕ್ಯಾಕ

~~ ಕುಕೂ..

1 comment:

Anonymous said...

adbhutavaagide sir !

hige munduvarsi