January 14, 2008

ಸಂಕ್ರಾಂತಿ

ಪಥವ ಬದಲಿಸಿ ಬಾನಲ್ಲಿ ಭಾನು
ದಕ್ಷಿಣಾಯದಿಂದ ಉತ್ತರಾಯಣದ ಸಂಗಮ ಸಂಕ್ರಾತಿ

ಮೈನಡುಗಿಸುವ ಮಾಗಿಯ ಚಳಿಯ ದೂಕಿ
ಗಾಳಿಯ ಬಿಸಿಯ ಹೆಚ್ಚಿಸಿ ಮೈಮನವ ತಣಿಸುವ ಸೌಖ್ಯ ಸಂಕ್ರಾಂತಿ

ಅಂಗಳದ ತುಂಬಾ ರಂಗೋಲಿಯಿಂದ ಕಂಗೊಳಿಸಿ
ಶೃಂಗಾರ ಗೊಳ್ಳುವ ಸುಂದರ ಸೊಬಗ ಸಂಕ್ರಾಂತಿ

ಉತ್ತು ಬೆಳೆದ ಪಸಲು ರಾಶಿ ಮಾಡಿ ರೈತಾಪಿ
ಹರ್ಷದಿ ಹರ್ಷಿಸುವ ಸುಗ್ಗಿ ಸಂವೃದ್ದಿ ಸಂಕ್ರಾಂತಿ


ಎಳ್ಳು ಬೆಲ್ಲವ ಹಂಚಿ ಒಳ್ಳೆಯ ಮಾತಾಡಿ
ಎಂದು ಹಾರೈಸುವ ಸುನುಡಿಯ ಸಂಕ್ರಾಂತಿ

ಒಳ್ಳೆಯ ಗಂಡ ಸಿಗಲೆಂದು ಹರೆಯದ ಹೆಣ್ಣು
ಶ್ರದ್ದೆಯಿಂದ ಆರಾಧಿಸುವ ಸುದಿನ ಸಂಕ್ರಾಂತಿ

ಸುಮಂಗಲೆಯರು ಮನೆಮನೆಗೆ ಹೋಗಿ
ದೀರ್ಘ ಸುಮಂಗಲೆಯಾಗೆಂದು ಆಶಿಸುವ ಸುಮಂಗಲಕರ ಸಂಕ್ರಾಂತಿ

ಸೂರ್ಯನನ್ನೇ ಶೃಂಗಾರ ಮಾಡಲು
ಬಣ್ಣದ ಗಾಳಿಪಟವ ಹಾರಿಸುವ ಸಂತಸದ ಸಂಕ್ರಾಂತಿ

ನಂದಿಯ ಕೊರಳಲ್ಲಿ ಗೆಜ್ಜೆಯನು ಕಟ್ಟಿ
ಸಿಡಿ ಹಚ್ಚಿ ಓಡಿಸಿ ಸಂಭ್ರಮಿಸುವ ಸಂಕ್ರಾಂತಿ

ಎಳ್ಳು ಬೆಲ್ಲ ಹೋಳಿಗೆ ಪಂಚಕಜ್ಜಾಯ
ಬಗೆ ಬಗೆಯ ಸಿಹಿಯನು ಆಸ್ವಾದಿಸುವ ಸುಭೋಗ ಸಂಕ್ರಾಂತಿ

ತೀರ್ಥಸ್ನಾನ ಧಾನ ಜಪ ತಪ ಪೂಜಾ ಆರಾಧನೆಯಲ್ಲಿ
ಜನರೆಲ್ಲ ಸೃಷ್ಠಿಯನ್ನು ಆರಾಧಿಸುವ ಸುಪುಣ್ಯ ಸಂಕ್ರಾಂತಿ

ಸಂಗಮ ಸೌಕ್ಯ ಸೊಬಗ ಸಂವೃದ್ದಿ ಸುನುಡಿ ಸುದಿನ
ಸುಮಂಗಲ ಸಂತಸ ಸಂಭ್ರಮ ಸುಭೋಗ ಸುಪುಣ್ಯ ಸಂಕ್ರಾಂತಿ

*~ಕುಕೂ..

January 12, 2008

ಯಾರ ಶಾಪ



ಯಾರ ಶಾಪ, ಎಲ್ಲಿಯ ಪಾಪ,
ಯಾವ ವಿಧಿಯ ಪ್ರಕೋಪ ಆಟ
ಯಾಕೋ ಇನ್ನು ಮುಗಿಯದು ಜಂಜಾಟ
ಬಿಡದು ಯಾಕಿನ್ನು ಬತ್ತಿದ ಕಾಯ ಅಂಟಿದ ಜೀವ

ಹಿಂಗಿ ಹೋದ ಬದುಕ ಸೆಲೆ
ಮರೆಯಾಗಿ ಹೋದ ಕನಸ ನೆಲೆ
ದಹಿಸುತ್ತಿರುವ ಬಡತನ ಜ್ವಾಲೆ
ಬಿಡದೆ ಬಿಗಿದಪ್ಪಿದ ಭವದ ಬಲೆ

ಹಸಿದ ಒಡಲಿಗೆ ಸಿಗದ ಕೂಳು
ಸೂರೆ ಇಲ್ಲದ ಬಾಳ ತಾವು
ಹರಿದ ಅರಿವೆ ಮುಚ್ಚಿ ಸುಕ್ಕಿನ ಕಾಯ
ಸೀದ ದೇಹಕೆ ಮುರುಟಿದ ಅಟ್ಟೆ

ವ್ಯಸ್ತ ಮನಸುಗಳ ಕುಟಿಲ ಕಾಯದೆ
ಮೆಟ್ಟಿ ನಿಂತಿದೆ ಧೀನ ಅಧೀನನ
ನೂರು ಆಹತಕೆ ನತ ದೇಹವು
ಎತ್ತ ನೋಡಲು ಸಿಕ್ಕದ ಕಾರುಣ್ಯ

ಚದುರಿ ಹೋದ ಕರುಳ ಕುಡಿಗಳ
ಮರಳಿ ಬಾರದ ಗತವ ನೆನೆದು
ಕಳೆದ ಸಂಬಂಭ ಮರಳಿ ಹುಡುಕುತ
ಕಳೆದುಕೊಂಡು ಕಣ್ಣ ಹನಿಯನು

ಮಾಡಲಾಗದು ತೊರಿದೊಂದನು
ಬಿಟ್ಟು ಹೋಗದು ಬಿಟ್ಟೆನೆಂದರು
ವ್ಯಸನ ಬದುಕಿಗೆ ಬೆಸದ ಬೇಗೆಯು
ಕುಪಿತ ಒಡಲು ವಡಬ ತಾಣವು

ಸಾಕು ಮುಗಿಸೋ ಸೂತ್ರಧಾರನೆ
ಸೂತ್ರವಾಡಿಸಿದಂತೆ ಆಡಿ ಎಲ್ಲವ
ಸವೆದು ಹೋಗಿದೆ ಜೀವ ದೇಹವು
ಸೈರಿಸಲು ಉಳಿದಿಲ್ಲ ಏನು ಶರಣಾಗುವೆ ಇಂದೇ ನಾನು.

**~ ಕುಕೂ ..