April 21, 2008

ಬಂತು ಬಂತು ಚುನಾವಣೆ

ಬಂತು ಬಂತು ನೋಡು ಚುನಾವಣೆ
ಮಿಂಡ ಪುಂಡ ಪೋಕರಿಗಳ ಚಲಾವಣೆ
ತುಂಬಿ ತುಳಿಕಿದ್ದರು ಊರಲ್ಲಿ ಬವಣೆ
ಮೀರಿ ನಡೆದಿದೆ ತಮ್ಮಲ್ಲೇ ಹಣಾಹಣೆ

ಉದ್ದುದ್ದ ಬೆಳೆದು ಅಡ್ಡದಾರಿ ಹಿಡಿದ

ಹೆಡ್ಡನಿಗೂ ಮೆರೆದಾಡುವ ಸುಗ್ಗಿ ಬಂತು
ತಿಂದು ಅಂಡೆಲೆದು ಕಾಲ ಕಳೆಯುವ
ಮೈಗಳ್ಳನಿಗೂ ಹೆಂಡದ ತೀರ್ಥ ಬಂತು

ಕಂಡ ಕಂಡ ಅಬಲೆ ಹೆಣ್ಣುಗಳ ಸೆರಗಲ್ಲಿ

ಇಣುಕಿದ ಲಜ್ಜೆಗೆಟ್ಟ ಕಚ್ಚೆ ಹರುಕರು
ಚುನಾವಣೆಯ ಸ್ಪರ್ಧೆಯಲಿ ಸೆಣಸಲು
ಸಜ್ಜಾಗಿ ಬರುವರು ನೋಟು ಕೊಟ್ಟು ಓಟುಕೇಳಲು

ಬಿದ್ದುಹೋಗಿರುವ ಗುಡಿ ಗೋಪುರಗಳು

ಉದ್ದಾರಮಾಡುವ ಹೆಡ್ಡರ ಮಾತುಗಳಿಗೆದ್ದು
ಆಪಕ್ಷ ಈಪಕ್ಷ ನೂರಾರು ಪಕ್ಷಗಳಗೆ
ಪಕ್ಷಾಂತರ ಗೊಳ್ಳುವ ಅವಾಂತದಲಿ ಸಿಲುಕುವವು

ಜಾತಿಯ ಕಿಚ್ಚಿಟ್ಟು ಎಂಜಲು ಹಂಚಿಟ್ಟು

ಮನಸ್ಸುಗಳ ನಡುವಿನ ಸೇತುವೆ ಮುರಿದಿಟ್ಟು
ಓಟು ಕಿತ್ತುಕೊಳ್ಳುವ ಸೂತ್ರವಿಡಿದು ಬರುವರು
ನಿತಿಗೆಟ್ಟರೂ ಗಾಂಧಿಯ ಮಾತನಾಡುವ ನಾಯಕರು


ಬೀದಿದೀಪಗಳಿಲ್ಲದೆ ಕತ್ತಲಲ್ಲಿ ಮರುಗಿದ್ದ

ಬೀದಿಕಂಬಗಳು ಮೂರು ದಿವಾದರು
ದೀಪದಲಿ ಬೀಗುತ್ತ ಬೆಳಗಿ ಮೆರೆಯುವವು
ಹರಡಿದ ಹೊನಲಿನಲಿ ಪಕ್ಷರಾಜಕಿಯ ನಡೆಯುವುದು

ಮೂಲೆಗುಂಪಾದ ದೀನ ಬಡಬಗ್ಗರಿಗೆ

ನೂರು ಭರವಸೆಗಳ ಸುಳ್ಳು ಆಸ್ವಾಸನೆಗಳು
ನಾವು ಅವರಂತಲ್ಲ ಲಂಚ ಹಗರಣ ನಮ್ಮಲ್ಲಿಲ್ಲ
ಒಮ್ಮೆ ಓಟುಕೊಟ್ಟು ನೋಡಿ ಎಂದು ಹೇಳುವರು

ಎಂದೂ ನಮ್ಮಕಡೆ ಮೂಸದ, ಹೆಣ್ಣು ಹೆಂಡ ಪಿಪಾಯಿಗಳು

ಶಂಡತನದಿ ಬಂದು ಕೈಯ ಕಾಲು ಹಿಡಿವರು
ಅಪ್ಪ ಅವ್ವ ಅಣ್ಣ ತಮ್ಮ ನೀವೆಲ್ಲ ನಮ್ಮವರು
ಎಂದು ಬೊಬ್ಬೆ ಇಟ್ಟು ಅರಚಿ ಕಿರುಚುವರು

ಊರಲ್ಲಿ ನೀರಿಲ್ಲದಿದ್ದರು ಹೆಂಡ ಸಾರಾಯಿ

ಬ್ರಾಂದಿಯ ಹೊಳೆ ಹರಿದು ಬರುವುದು
ಬಸ್ಸುಗಳೇ ಕಾಣದ ಊರದಾರಿಗಳಲ್ಲಿ ಮೂರುದಿನ
ಜೀಪು ಕಾರು ಗಾಡಿಗಳದೇ ಕಾರುಬಾರು

ಹಗರಣದಿ ಕೂಡಿಟ್ಟ ಬೊಗಣಿ ಕಾಂಚಣವನು
ತಂದು ನಿಮಗೆ ಹಂಚುವರು ಅರಿಯೋ ನೀ ಮಂಕೆ
ಇಂದು ಇದ ಮರೆತು ಎಂಜಲಿಗೆ ಕೈಚಾಚಿದರೆ
ಮುಂದೈದೊರುಷ ದಿನ ನಿನ್ನೇ ಹರಿದು ತಿನ್ನುವರು


** ಕುಕೂ..

April 19, 2008

ಕಾದಿರುವೆ ಅಭಿಸಾರಿಕೆ



ಇನಿಯ ನಿನ್ನ ಕನಸನ್ನು ಕಂಗಳಲಿ ಕಟ್ಟಿ
ಕಾದಿಹೆನು ಎವೆಮುಚ್ಚದೆ ಕಾತುರದಿಂದ
ನಿದ್ದೆಯಲಿ ಜಾರಿಬಿಡುವೆನೆಂಬ ಆತಂಕ
ಕಂಗಳ ತೆರೆದು ನಿನ್ನ ಹುಡುಕುತಿರುವೆನು

ನಿನ್ನೆ ನೀ ತಂದು ಮುಡಿಸಿದ ಮಲ್ಲೆ
ಮುದುಡಿ ಬಾಡಿ ಮುನಿಸಿ ಮಾಸಿಹವು
ಇಂದು ತರುವೆಯ ಬಿಳಿದುಂಡು ಮಲ್ಲಿಗೆ?
ಎಂದು ಮನಸು ಮೌನದಲಿ ಕೇಳಿಹುದು

ಕಂಗಳ ಕೊಳದೊಳಗೆ ನಿನ್ನದೇ ಬಿಂಬ
ಸನಿಹವಿರದ ನಿನ್ನನ್ನು ಅಲ್ಲಿ ಕಾಣುತಿಹೆನು
ವಿರಹ ವಡಬಾನಲವಾಗಿ ಕುದಿಯುತಿಹುದು
ಬಾರೋ ಕಾಂತ ಕೊಳಬತ್ತುವ ಮೊದಲು

ಒಂಟಿಯಾಗಿ ಕುಳಿತಿರುವೆ ಗೋಡೆಗಳ ನಡುವೆ
ನೆನವುತ್ತ ಮುದದಿ ನೀಕೊಟ್ಟ ಚುಂಬನ
ಆದರದಿ ನೀನು ಬಿಗಿದಪ್ಪಿದ ಬಿಸಿ ಆಲಿಂಗನ
ಮೈಯಲ್ಲಿ ನವುರು ಯಾತನೆ, ಅಣೆಯಲ್ಲಿ ಬೆವರು

ಹಸಿವಿನ ಅರಿವಿಲ್ಲ ಉದರ ಬರಿದಾದರು
ಬರಿ ನಿನ್ನದೇ ನೆನಪು ಕ್ಷಣಕ್ಷಣವು ಕನವರಿಕೆ
ಕಾಲಸೂಚಕನ ಮುಳ್ಳು ತಿರುಗದೆ ತಡದಂತೆ
ಗಳಿಗೆ ಯುಗವಾಗಿ ಬಳಲಿರುವೆ ಬಾರೋ

ಹಲ್ಲಿ ಲೊಚಗುಟ್ಟಿದರೂ, ಕರು ನೆಗೆದರೂ
ಇರುವೆ ನಡೆವ ಶಬ್ದ ಸುಳಿದರೂ ಸಾಕು
ಮನಕೆ ನೀ ನಡೆದು ಬಂದೆಂಬ ತಳವೆಳಗು
ಮುನಿಸು ಮನದಲ್ಲಿ ಜಗದ ಜಂಜಾಟದಲ್ಲಿ

ಇಣುಕಿದೆ ಸೂರ್ಯ ರಶ್ಮಿ ತೆರದ ಕಿಟಕಿಯಲಿ
ಸುಯ್ಯುತಿದೆ ಗಾಳಿ ಸುಳಿ ಸುಳಿಯಾಗಿ
ವಾಲುತ್ತ ಪಡುವಣದಿ ನಿತ್ಯ ನಡೆದಿಹನು
ತಡ ಇನ್ನುಯಾಕೋ ಇನಿಯ ನೀಬಾರೋ ಬೇಗ

ಕಾಲಲ್ಲಿ ಕಿರುಗೆಜ್ಜೆಯ ಗಲಿರು ಗಲಿರು ನಾದ
ಕೋಣೆಯಲಿ ಕೈ ಬಳೆಯ ಮನ ಮೋಹಕ ಸದ್ದು
ಉಸಿರ ಬಿಸಿ ಏರುತಿದೆ ನೆನಪಿನ ಸುಳಿದಾಟಕೆ
ರತಿಬಯಕೆಯ ಬಸಿರು ಕ್ಷಣಗಣಿಕೆಯ ನಡೆಸಿದೆ

ಬಿಸಿಕೂಳ ಕೈತುತ್ತು ಉಣಿಸುವ ಬಯಕೆ
ಜೇನುತುಪ್ಪ ಸೇರಿಸಿ ಹಾಲುಸಕ್ಕರೆ ಬೆರಸಿ
ನಿನಗೆ ಕುಡಿಸುವ ಹಂಬಲವು ಮನದಲ್ಲಿ
ಅಂಗನೆ ಅಭಿಸಾರಿಕೆ ನಾನು, ಕಾದಿರುವೆ ಬಾರೋ




** ಕುಕೂ....


ತಳವೆಳಗು-ಭ್ರಮೆ

April 17, 2008

ಕೊಂಕು........!


ಕೊಳದೊಳಗೆ ಕಲ್ಲು ಹಾಕಿ
ಚಂದ್ರ ಬಿಂಬ ಕದಡಿದ ಕೈ
ಕೊಂಕಿನಿಂದ
ಕೇಳಿತು
ನಿನಗೆ ಕೋಪ ಬರಲಿಲ್ಲವೇ
ಎಂದು,
ಮಂದಾಹಾಸವ ಬೀರಿ
ನಗುನಗುತಲಿ
ನೋಡುತಿದ್ದ
ನನ್ನನ್ನು
ಪಕ್ಕದ ಕೊಳದಲ್ಲಿ
ಆ ಬಿದಿಗೆ ಚಂದ್ರಮ


`~ ಕುಕೂ ~~



ಕುಮಾರ ಸ್ವಾಮಿ ಕಡಾಕೊಳ್ಳ
ಪುಣೆ
12/10/06

April 08, 2008

** ಯುಗಾದಿ ಬಂತು ಯುಗಾದಿ **

ಯುಗಾದಿ ಬಂತು ಯುಗಾದಿ
ನಮ್ಮ ಹೊಸವರ್ಷ ಯುಗಾದಿ
ಕಟ್ಟೋಣ ಮಾವು ಬೇವಿನ ತೋರಣ
ಶೃಂಗಾರ ಮಾಡೋಣ ಮನೆ ಆವರಣ

ಉದುರಿ ಹೋದವು ತರಗಲೆಗಳು
ಚಿಗುರಿ ಬಂದವು ಹಸಿರೆಲೆಗಳು
ಬಿರಿದರಳಿ ನಗುತಿವೆ ಬಣ್ಣದ ಹೂಗಳು
ಸೆಳೆದೆಳದಿವೆ ಭೃಂಗಗಳಿಂಡನು

ಚೈತ್ರಮಾಸದ ಹಸುರಿನ ತೇರಿನಲ್ಲಿ
ತರುಗಳಲ್ಲಬ್ಬಿದ ಹೂತೊಂಗಲಲ್ಲಿ
ಬಿಸಿಲೇರಿದ ತಿಳಿಬೆಳಗಿನ ಹಾದಿಯಲ್ಲಿ
ಬಂದಿದೆ ನೋಡು ಹೊಸವರ್ಷ ಯುಗಾದಿ

ತಣ್ಣನೆ ಸುಯ್ಯುವ ಸುಳಿಗಾಳಿಗೆ ತಣಿದು
ಕುಹೂ ಕುಹೂ ಎಂದಾಡಿದೆ ಕೋಗಿಲೆ
ಸೂಸುವ ಕಂಪನು ಹೀರುತ್ತ ಜೋರು
ಝೇಂಕಾರ ಹೊಮ್ಮಿಸಿದೆ ದುಂಬಿಯ ದಂಡು

ಬೇವು ಬೆಲ್ಲವ ಬೆರಸಿ ಮೆಲ್ಲುತ
ಕಷ್ಟ ಸಹಿಸುತ ಸುಖವ ಅರಸುತ
ಜಟ್ಟಿ ಬಾಳನು ಗಟ್ಟಿಸಿ ಬಾಳಿರೆನುತ
ಬಂದಿದೆ ಸೊಗಸ ಹೊಸವರ್ಷ ಯಗಾದಿ

ವರ್ಷಕೊಮ್ಮೆ ಮರಳುವುದು ಯುಗಾದಿ
ಹಸಿರಲ್ಲಿ ಬೀಗುತ ಕಂಪಲ್ಲಿ ಮೀಗುತ
ತುಂಬಿಸಿ ಎಲ್ಲರಲು ಹೊಸತು ಸಂತಸ
ಭಾವಕ್ಕೆ ಸಿರಿಯನ್ನ ಬೆರೆಸಿರೆನ್ನುತ


** ಕುಕು...

April 05, 2008

** ಒಲವ ಸುಮ ಅರಳಲು **


ಬೆಚ್ಚಿರುವೆ ಯಾಕೆ ನನ್ನಕ್ಕರೆಯ ಸುಮವೆ
ನಾನೇಗೆ ನಲಿಯಲಿ ನೀ ದುಃಖಿಯಾದರೆ
ನಿನ್ನ ದುಃಖಕ್ಕೆ ಕಾರಣವ ತಿಳಿಸು
ಕೋಟಿ ಕಷ್ಟಮೆಟ್ಟಿ ನಗುವ ಹೊತ್ತುತರುವೆನು

ಇರಲಿ ನೂರು ಅಡೆತಡೆ ಕೆಡುಕುಗಳು
ಜಾಲವೆ ಬೀಸಿದರು ನುಗ್ಗಿ ಬಿಡುವೆನು
ಪ್ರಾಣವನೆ ಕೇಳಿದರು ಒತ್ತೆ ಇಡುವೆನು
ನಿನ್ನ ದುಃಖವನು ನಾದೂರಮಾಡಲು

ಮಿಟುಕಿ ಹಾಕುವೆನು ಕುಟಿಲ ಕೆಡುಕುಗಳನು
ಈಸುವೆನು ನೋವಿನ ಸೆಳುವು ಇದಿರಾದರು
ನಿನ್ನ ನಗುವಿಗಾಗಿ ಹಂಗುತೊರೆವೆನು
ವಿಷವಾದರು ಕುಡಿವೆನು ಅಮೃತವೆಂದು

ಸುಡುಬಿಸಿಲಿದ್ದರೆ ನೆರಳಾಗಿ ಬರುವೆ
ಮರುಭೂಮಿ ಧಗೆಯಲ್ಲಿ ನೀರಾಗಿ ತನಿಸುವೆ
ಸಾವಿರ ನೋವಿದ್ದರು ನಿಶ್ಚಿಂತೆಯಲಿ ನುಂಗುವೆ
ತಿಳಿಸು ನಿನ್ನ ನೋವಿನ ಕಾರಣವನಿಂದು

ನಿನ್ನ ಕಂಗಳು ಹನಿದರೆ ನನ್ನೆದೆ ಬತ್ತುವುದು
ನೀರೋದಿಸಿದರೆ ನನ್ನುಸಿರು ಕಟ್ಟುವುದು
ಅಳುಮೋರೆ ಕಂಡೆನ್ನ ಬದುಕೆಲ್ಲ ಕಾವಳವು
ನಿನ್ನ ನೋವನರಿತೆನ್ನೋಡಲು ವಡಬಾನಲವು

ನೀಹೇಳದಿದ್ದರು ಅರಿವುದೆನ್ನ ಹೃದಯವು
ನಿನ್ನೆದೆಯ ಮೊನಚು ನೋವಿನಾಳವನು
ನಾತಾಳಲಾರೆ ಅದುಯಾವ ಜನ್ಮದನಂಟೋ
ನೀದುಃಖಿಯಾದರೆ ಮನ ಅತ್ತುಬಿಡುವುದು

ಏರು ಇಳಿತಗಳ ನಡುವೆ ಇದ್ದರು ಜಾಡು
ನೋವು ನಲಿವಿನ ಅರಿವಿನಲಿ ನಡೆದೆರೆ
ಬಲುಸೊಗಸು ನೋಡು ಬಾಳಪಯಣವು
ಅಳಬೇಡ ನನ ಗೆಣತಿ ಬದುಕು ಬಲುಚಂದ

ನಿನ್ನ ನಗುವೆ ಹೂವಿನಾ ಮಂದಹಾಸವು
ಕಾದಿರುವೆನು ಬಿರಿದರಳುವ ಹೂವನೋಡಲು
ನಕ್ಕುಬಿಡುವೊಮ್ಮೆ ಒಲವ ಸುಮ ಅರಳಲು
ಸಾಕು ನನಗದೊಂದೆ ಬೇರೇನು ಬೇಡೆನು

** ಕುಕೂ....