November 06, 2009

ಮಳೆಯೆಂಬ ಮಾಯೆ ||


ಕರ್ನಾಟಕದಲ್ಲಿ ಇತ್ತೀಚಿಗೆ ಹುಚ್ಚೆದ್ದು ಸುರಿದ ಮಳೆ...ಮಳೆ ನೆರೆಯಾಗಿ ತಂದ ಆತಂಕ...ಇದನ್ನೆಲ್ಲ ಕಂಡ ಬೆದರಿದ ನನ್ನೊಳಗೆ, ಪ್ರಕೃತಿಯ ಮುನಿಸಾಟಕೆ ಕಾರಣವನ್ನು ಹುಡುಕಾಡುವಾಗ .....ಈ ಕವಿತೆ ಹುಟ್ಟಿತು.
ಈ ಕವನ "
ಈ-ಕಸನಸು" ಆನ್ಲೈನ್ ಪತ್ರಿಕೆಯಲ್ಲಿ ಬೆಳಕಿಗೆ ಬಂದಿತ್ತು.

ಕಡಲುಕ್ಕಿ ನೀರ ನೊರೆ
ಉಗಿಯಾಗಿ ಗಾಳಿಯಲಿ
ಮುಗಿಲಾಗಿ ಬಾನಲ್ಲಿ
ನೆಲೆಗಿಳಿದು ಹನಿಯಾಗಿ
ಮಳೆಯಾಗಿತ್ತು ಬದುಕು

ಹನಿಯು ನೆಲೆಗಿಳಿದು
ಮಣ್ಣ ಹಸಿಯಾಗಿ
ಹಸಿರ ಹುಸಿರಾಗಿ
ಬದುಕು ಹಸನವಾಗಿ
ಸಾಗಿತ್ತು ಜಗದ ಮಾಯೆ.

ಎಂತಕೋ ಮುನಿಸಿದು
ಕಡಲು ಮೊರೆಯಿತು
ಮೋಡ ಮುಸಿಕಿತು
ಹನಿಯು ಬಿರಿದಿತು
ನೀರು ನೆರೆಯಾಯ್ತು

ತೊರೆಹಳ್ಳ ಹೊಳೆಯಾಗಿ
ಹೊಳೆಯು ಹುಚ್ಚಾಗಿ
ನೆರೆ ನಿಟ್ಟುಗೆಟ್ಟು
ಕೊಚ್ಚಿ ಕೊಂಡೊಯ್ತು
ಬದುಕನು ಮಾಯೆ!

ನಿಂತ ಬೆಳೆ ನೀರಾಗಿ
ನೀರಾಲ್ಲೇ ಮುಳಿಗೋಗಿ
ಕೂಳೇ ಇಲ್ಲದಾಗಿ
ಬಾಳೇ ಗೋಳಾಯ್ತು
ಇಂದು ನಾಳೆ ಮಾಯೆ!

ಯಾರು ಹೊಣೆಯಾರು
ಮಾಹೆಯ ಮುನಿಸಿಗೆ?
ಎನ್ನೆದೆಯೊಳಗೆ ಪಿಸುಗುಟ್ಟಿತು
ಮಾತಿಲ್ಲದೆ ಕಂಗು
ನಿನ್ನ ಬದುಕಿನ ಶೈಲಿಯೆಂದು!



ಕುಮಾರಸ್ವಾಮಿ.ಕಡಾಕೊಳ್ಳ

June 04, 2009

ಇಂದು ವಿಶ್ವ ಪರಿಸರ ದಿನ

ಇವತ್ತು ದಿನಾಂಕ ಜೂನ್ ಐದಂತೆ
ಈದಿನವೆ ವಿಶ್ವ ಪರಿಸರ ದಿನವಂತೆ
ಗ್ಲೋಬಲ್ ವಾರ್ಮಿಂಗ್ ಮುಖ್ಯವಿಷಯವಂತೆ
ದಾರಿಯ ಅಕ್ಕ ಪಕ್ಕದಲ್ಲೂ
ಕಂಪನಿಗಳ ತುಂಬೆಲ್ಲಾ
ಶಾಲೆಯ ಆವರಣದಲ್ಲೂ
ವಿಶ್ವ ವಿದ್ಯಾನಿಲಯಗಳಲ್ಲೂ
ರೈಲ್ ಬಸ್ಸುಗಳ ಮೇಲು
ದಿನ,ವಾರಸುದ್ದಿ ಪತ್ರಿಕೆಗಳಲ್ಲೂ,
ಟೀ.ವ್ಹಿ. ರೇಡಿಯೋದಲ್ಲೂ
ಎಲ್ಲೊಲ್ಲೂ ಇದೇ ಬ್ಯಾನರ್ ಗಳ
ಸುದ್ದಿಗಳ ಭರಾಟೆಯಂತೆ

ಸಾರ್ವಜನಿಕ ವಾಹನ ನೂಕು ನುಗ್ಗಲಂತೆ
ಅದಕೆ ಪಟ್ಟಣದ ಜನಕೆ ಸ್ವಂತ ಗಾಡಿ ಬೇಕಂತೆ
ಒಬ್ಬರಿಗೆ ಒಂದೊಂದು ಕಾರು
ಸ್ಟೇಟಸ್ ಸಿಂಬಾಲಂತೆ
ಮಗನಿಗೆ ಕಾಲೇಜ್ ಗೆ ಹೋಗಲು
ಟೂ ಹಂಡ್ರೆಡ್ ಸಿ. ಸಿ ಬೈಕೇ ಬೇಕಂತೆ
ಮನೆಯಲ್ಲಿ ಫ್ರಿಜ್ ಇರಲೇ ಬೇಕಂತೆ
ಸಂತೆ ಸಾಮಾನು ತರಲು ಕೈಚೀಲ
ಜೊತೆಗೊಯ್ಯೋದು ಹಳೇ ಫ್ಯಾಶನಂತೆ
ಪಾಕೆಟ್ ಫುಡ್ ಫುಲ್ 'ಸೇಫ್' ಅಂತೆ
ಬಾಟಲಿ ನೀರು ತುಂಬಾ 'ಪ್ಯೂ'ರಂತೆ
ಸೊಳ್ಳೆ ಪರದೆ ಕಟ್ಟೋಕೆ ಪೇಶನ್ಸ್ ಇಲ್ಲವಂತೆ
ಅದಕೆ ಮಸ್ಕೂಟೋ ಕಾಯಿಲ್ ಹಚ್ತಾರಂತೆ
ಇಷ್ಟೇ ಅಲ್ಲ ಇನ್ನೆಷ್ಟೋ
ಪರಿಸರಕೆ ಹೊಗೆ ಉಗುಳೋ
ವಾತಾವರಣ ಬಿಸಿ ಏರೋ
ಪೂರಕ ಬದುಕು ನಡೆಸ್ತಾರೆ
ದೊಡ್ಡದಾಗಿ ಪರಿಸರ ರಕ್ಷಣೆ,
ಗ್ಲೋಬಲ್ ವಾರ್ಮಿಂಗ್
ಅಂತ ವರ್ಷಕ್ಕೊಮ್ಮೆ ಹೂಯ್ಲಿಡ್ತಾರೆ

ಶಕ್ತಿ ಮಿತವ್ಯಯ ಮಾಡಂತ
ಯಾರರ ಹಿತ ಮಾತಿಗೆ
ನಿಮ್ಮಪ್ಪಂದು ಏನ್ ಹೋಗುತ್ತೆ ಅಂತಾರೆ
ಮನೆ ಹೊರಗೆ ಹೋಗ್ತೀಯ
ಲೈಟ್, ಫ್ಯಾನ್ ಬಂದ್ಮಾಡು
ಅಂತ ಯಾರದ್ರು ಹೇಳಿದ್ರೆ,
ನಮ್ದೇನ್ ಹೋಗ್ತಾದೆ
ಮನೆ ಓನರ್ ಬಿಲ್ಲ್ ಕಟ್ತಾನೆ ಅಂತಾರೆ
ಚಾಕ್ಲೇಟ್ ತಿನ್ ಬೇಡ
ಪರಿಸರ ಕೆಟ್ಟೋಗುತ್ತಂದ್ರೆ
ಟೇಸ್ಟೇ ಇಲ್ದೋರ್ ಅಂತ ಮೂದಲಿಸ್ತಾರೆ
ಸಾರ್ವಜನಿಕ ವಾಹನ
ಉಪಯೋಗಿಸು ಅನ್ನೋ ಮಾತಿಗೆ
ಕಂಫಾರ್ಟ್ ಇಂಪಾರ್ಟೆಂಟ್ ಅಂತಾರೆ
ಎಲ್ಲರಿಗೂ ಬೇಕು ದೊಡ್ಡಮನೆ,
ಜೊತೆಗೆ ಪ್ರೈವೇಟ್ ರೂಮ್
ಅದರಲ್ಲಿ ಇರಬೇಕು ತೇಗ, ಬೀಟೆ
ಹೊನ್ನೆ ಮರಗಳ ಫರ್ನೀಚರ್
ವೆಸ್ಟರ್ನ್ ಟಾಯ್ಲೆಟ್ ಗೆ ನೀರು
ಜಾಸ್ತಿ ಬೇಕಾದ್ರು ಇದು ಹೊಸ
ಸ್ಟೈಲ್ ಅಂತ ಬ್ಲೈಂಡಾಗಿ ಫಾಲೋ ಮಾಡ್ತಾರೆ
ಹಳ್ಳೀಲಿ ನೀರು ಸಿಗದಿದ್ರೂ ದಿಲ್ಲಿಯವರಿಗೆ
ಬಾಟ್ಲು ನೀರು ಪೆಪ್ಸಿ ಕೋಲಗಳೇ ಬೇಕಂತೆ
ಹಳ್ಳಿಯಲಿ ನೀರಿಲ್ದೇ ಜನ ಸಾಯ್ತಾರೆ
ನೀವು ಹಿಂಗೆ ಮಾಡ್ಬಹುದೇ ಅಂದರೆ
ನಮ್ಮ ದುಡ್ಡು ನಮ್ಮಾತು
ಕೇಳೋಕೆ ನೀನ್ಯಾರು ಅಂತಾರೆ

ಇಷ್ಟೆಲ್ಲಾ ಮಾಡೋರು
ವಿದ್ಯಾವಂತ ಪಟ್ಟಣದವ್ರೇ ಆದ್ರೂನು
ಪರಿಸರ ಹಾಳಾಗ್ಲಿಕ್ಕೆ ಅನಕ್ಷರಸ್ಥ, ದಡ್ಡ
ಹಳ್ಳಿ ಜನಾನೇ ಕಾರಣ ಅಂತಾರೆ
ಮುಟ್ಲಿಲ್ಲ ಮಾಡ್ಲಿಲ್ಲ ಮೂಗ್ಯಾಕ್ ಮಸಿ ಆಯ್ತು
ಅನ್ನೋ ಮಾತಿನಹಾಂಗೆ ಹಳ್ಳಿ ಜನಕೆ
ಇಂದು ಪರಿಸರ ರಕ್ಷಣೆ ಬಗ್ಗೆ
ಬುದ್ದಿ ಜೀವಿಗಳಿಂದ
ಭಾಷಣ ಕೇಳೋ ಪಡಿಪಾಟಲು ಬಂತು

ಹಾಳಾಗುವುದಿಲ್ಲ ನಮ್ಮ ಪರಿಸರ
ಅಕ್ಷರ ತಿಳಿಯದ ದಡ್ಡ ಹಳ್ಳಿ ಜನರಿಂದ
ಇನ್ನು ನಾವು ಉಸಿರಾಡುವುದು
ಅವರು ನಡೆಸುವ ಸರಳ ಜೀವನದಿಂದ
ಇದಕ್ಕೆಲ್ಲ ನಮ್ಮ ಉಪಭೋಗ ಜೀವನ ಕಾರಣ
ನಿಲ್ಲುವುದೆಂತು ಪರಿಸರ ಮಾಲಿನ್ಯ
ನಿಲ್ಲದೇ ನಮ್ಮೆಲ್ಲರ ಕೊಳ್ಳುಬಾಕುತನ
ಅದಕೆ ಆಗಬೇಕು ನಮ್ಮ ಬದುಕು ಸರಳ
ನೆಟ್ಟು ಬೆಳಸುತ್ತಿರಬೇಕು ಅಡವಿಯಂತೆ ಮರ
ಇದೊಂದೇ ನಮಗೆ ಇರುವ ಸರಳ ಸೂತ್ರ

** ಕುಕೂಊs ..
ಪುಣೆ
07/06/08