ಮನವು ನೊಂದಿದೆ ಗೆಳತಿ
ನನ್ನ ಮನ ನೊಂದಿದೆ ಗೆಳತಿ
ನಿನ್ನ ಮೌನದಿಂದ ಎದೆಬಿರಿದೆ
ಹೃದಯ ತಾಳದೆ ಮರುಗಿದೆ
ದಾರಿ ದೀಪ ನಂದಿದೆ
ಬಾಳ ದಾರಿ ಮಾಸಿದೆ
ಬರಿ ಕತ್ತಲು ಅಷ್ಟ ದಿಕ್ಕಲು
ದಿಕ್ಕಪಾಲು ನನ್ನ ಬದುಕು
ತಾರೆ ಇಲ್ಲದ ನಭೋಮಂಡಲ
ಚಂದ್ರಿಕೆ ಬಾರದ ರಾತ್ರಿ ಕಾವಳ
ನನ್ನ ಬಾಳ ದಾರಿ ಪಾಡು
ಮೌನ ಮುರಿದೊಮ್ಮೆ ಮಾತನಾಡು
ಮರುಭೂಮಿಯಲಿ ನೆರಳು ಅರಸಿ
ಬೆಂದ ಜೀವನ ನನ್ನದು
ಮನವು ನೊಂದಿದೆ ತಾಳಲಾರದೆ
ಮಾತನಾಡೊಮ್ಮೆ ಒಲವಿನ ಗೆಳತಿ
ವಿರಸವು ವಿಷಮವಾಗಿ
ಕ್ಷಣಗಳು ಯುಗಗಳಾಗಿ
ವಿರಸ ಕ್ಷಣಗಳು ಎದೆಯುತುಂಬಿ
ಮನಸು ನರಳಿದೆ ಗೆಳತಿ
ಕಾರಣ ಸಕಾರಣವು
ಕೇಳಿಸಿತು ನೂರು ಕಾರಣ
ಹೇಳಿಸಿತು ಮಿತ್ಯನೂರಾರು
ಇದ ನೀನರಿಹೆ ನನ ಗೆಳತಿ
ಕುಟಿಲವ ಯೋಚಿಸಲಿಲ್ಲ
ಕುಟಿಲ ಕಾರ್ಯವ ಮಾಡಲಿಲ್ಲ
ಕಾಲ ಪಥದಲಿ ಸಿಲುಕಿ ನನಗೆ
ಶಂಕೆಯ ವಿಷ ಸಿಂಚನ
ವ್ಯಸ ಕಾಮುಕ ನಾನಲ್ಲ
ವಿಕಟ ವರ್ತುಲ ನನಗಿಲ್ಲ
ಎನ್ನೆದೆಯ ಅನುರಾಗ
ನಿನಗಲ್ಲದೆ ಯಾರಿಗಲ್ಲ
ಕ್ಷಮೆ ಕ್ಷಮೆ ಕ್ಷಮೆ ಯಾಚಿಸುವೆ
ನಿನ್ನ ದುಃಖವು ನನ್ನ ಹೆಸರಲೆ
ಕ್ಷಮಿಸು ನೀನೊಮ್ಮೆ ಗೆಳತಿ
ಮನವು ಮಸಣವಾಗಿದೆ
ಯಾವುದೋ ಭಾವವದು
ಕದಡುತಿದೆ ನೆನಪನು
ನೆನಪೆ ಹರಿತ ಹಲಗಾಗಿ
ಸೀಳುತಿದೆ ಹೃದಯವನು
ಆಕಾಲ ಈಕಾಲ ತ್ರಿಕಾಲ
ನಿನ್ನ ಒಲವಿನ ಪೂಜೆ ಮಾಡುವ
ಪ್ರೇಮದಾಸನು ನಾನು
ವರವ ನೀಡು ಗೆಳತಿ
ಕಾದಿರುವೆ ಹಂಬಲಿಸಿ
ಕಾಯುವೆನು ಕಿವಿ ಆಲಿಸಿ
ಕೊನೆವರೆಗು ಕೇಳಲು
ನಿನ್ನ ಸವಿಮಾತೊಂದನು
ಮನ ನೊಂದಿದೆ ಗೆಳತಿ,
ಮಾತಾಡೊಮ್ಮೆ
ಮುರಿದು ಮೌನದ ಭಿತ್ತಿ
ಓ! ನನ್ನ ಒಲವಿನ ಗೆಳತಿ
ನೀನುಡಿಯೆ ಅಕ್ಕರೆಯ ಸೊಲ್ಲೊಂದು
ಮನವು ನೊಂದಿದೆ ಗೆಳತಿ
ಮಾತನಾಡೊಮ್ಮೆ ಗೆಳತಿ