March 06, 2008

ಹೆಜ್ಜೆ ಗುರುತು



ಹತ್ತು ಹಲವು ತಿರುವಿನಲ್ಲಿ
ಸುತ್ತುಹಾಕಿ ಬೆಪ್ಪನಾಗಿ
ನಡೆದು ಬಂದೆ ಹುಟ್ಟಿನಿಂದ
ಬದಕಿನ ದೂರ ದಾರಿಯಲ್ಲಿ

ಬಾಲ್ಯದಾಟ ಸೊಗಸ ದಾಟಿ
ಏರಿಬಂದ ಯವೌನ ಮೀಟಿ
ಕೂಡಿಕೊಂಡು ಸರಸ ಸತಿ
ದಾಟುತಿಹೆನು ಬದುಕ ತಟ

ಕಾಮ ಮೋಹ ಈರ್ಷ್ಯೆ ದ್ವೇಷ
ಸೆಳವಿನಲ್ಲಿ ಸೆಣಸಿ ಬಂದೆ
ಪ್ರೀತಿ ಪ್ರೇಮ ಸ್ನೇಹ ಅನುಭಂದ
ಸಮ್ಮೋಹಿತ ಸಾರ ಹೀರಿ ಬಂದೆ

ಏಳು ಬೀಳು ನಿತ್ಯ ಬಾಳು
ಹಗಲು ರಾತ್ರಿ ಎಲ್ಲ ಗೆದ್ದು
ಎದ್ದು ಬಂದೆ ನೆನಪು ತುಂಬಿ
ಇದ್ದ ದಾರಿ ನಡೆದು ಸವೆಸಲು

ಹುಟ್ಟು ಸಾವು ಎರಡು ತೀರ
ಸುಖ ದುಃಖ ಬದಿ ಅಕ್ಕ ಪಕ್ಕ
ಅರಿವು ಮರೆವು ಮೇಲೆ ಕೆಳಗೆ
ನಡುವೆ ನನ್ನ ಬಾಳ ದಾರಿ

ಹುಟ್ಟು ಅಕಸ್ಮಿಕ ಆರಂಬದಲ್ಲಿ
ಜ್ಞಾನ ದೀಪ ಬೆಳಕಿನಲ್ಲಿ
ಹುಟ್ಟು ಸಾವು ಮಿಲನದಲ್ಲಿ
ಸಾವು ನಿಚ್ಚಿತ ನೆಚ್ಚಿ ಹೊರಟೆ

ಎದ್ದು ಬಿದ್ದು ಉತ್ತು ಬಿತ್ತಿ
ನನ್ನದಲ್ಲದ ಎಲ್ಲ ಬಿಟ್ಟು
ಅನುಭವಗಳ ಹೆಜ್ಜೆ ಗುರುತು
ಬಿಟ್ಟು ಬಂದೆ ಮುಂದೆ ಮುಂದೆ

2 comments:

sunaath said...

ಕುಮಾರಸ್ವಾಮಿ,
ಈ ಚಿತ್ರಕ್ಕೆ ನೀವು ಬರೆದ ಕವನ ಬಹಳ ಸೊಗಸಾಗಿ suit
ಆಗಿದೆ. Well done!

Sushrutha Dodderi said...

ಪ್ರಿಯ ಕುಮಾರಸ್ವಾಮಿ,
ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ